ದಾವಣಗೆರೆ: ಹತ್ತು ಜನ ಶಾಲಾ ಬಾಲಕಿಯರಿಂದ ಶೌಚಾಲಯ ಶುಚಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಶಿಕ್ಷಕಿ (ಆಂಗ್ಲ ಭಾಷೆ) ಸಾವಿತ್ರಮ್ಮ ಸಿ.ಕೆ. ಅವರನ್ನು ದಾವಣಗೆರೆ ಜಿ.ಪಂ ಸಿಇಒ ಸುರೇಶ್ ಹಿಟ್ನಾಳ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಘಟನೆ ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಫೆ.13 ರಂದು ನಡೆದಿತ್ತು.
ಮುಖ್ಯ ಶಿಕ್ಷಕಿ ಮೇಲಿನ ಸಿಟ್ಟಿಗಾಗಿ ವಿದ್ಯಾರ್ಥಿನಿಯರಿಂದ ಶೌಚವನ್ನು ಶುಚಿಗೊಳಿಸಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದರು. ಈ ಕಾರಣಕ್ಕೆ ಶಿಕ್ಷಕಿ ಸಾವಿತ್ರಮ್ಮ ಅವರ ತಲೆದಂಡವಾಗಿದೆ.
ಮುಖ್ಯ ಶಿಕ್ಷಕಿ ಶೋಭಾ ಎ ಹಾಗೂ ಸಹ ಶಿಕ್ಷಕಿ ಸಾವಿತ್ರಮ್ಮ ಸಿ.ಕೆ. ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿದೆ. ಹೀಗಾಗಿ ಶಿಕ್ಷಕಿ ಸಾವಿತ್ರಮ್ಮ, ಮುಖ್ಯ ಶಿಕ್ಷಕಿ ಶೋಭಾ ವಿರುದ್ಧ ಷ್ಯಡ್ಯಂತ್ರ ರೂಪಿಸಿದ್ದರು ಎಂದು ತಿಳಿದುಬಂದಿದೆ ಎಂದು ಅಮಾನತು ಮಾಡಿ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ?: ಸೋಮವಾರ ಸರ್ಕಾರಿ ಪ್ರೌಢ ಶಾಲೆಯ ಹತ್ತಕ್ಕೂ ಹೆಚ್ಚು ಜನ ಬಾಲಕಿಯರು ಸಮವಸ್ತ್ರದಲ್ಲಿ ಪೊರಕೆ ಹಿಡಿದು ಶೌಚಾಲಯ ಸ್ವಚ್ಛಗೊಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ಬೆನ್ನಲ್ಲೇ ತಕ್ಷಣ ಶಾಲೆಗೆ ದೌಡಾಯಿಸಿದ ದಾವಣಗೆರೆ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿಯವರು ಮಕ್ಕಳೊಂದಿಗೆ ಚರ್ಚೆ ನಡೆಸಿದರು.
ಶಾಲೆಯಲ್ಲಿ ಸಭೆ ಮಾಡಿ ಮಕ್ಕಳು ಹಾಗೂ ಶಿಕ್ಷಕಿಯರು ಮತ್ತು ಗ್ರಾಮಸ್ಥರಿಂದ ಮಾಹಿತಿ ಪಡೆದರು. ಬಳಿಕ ವರದಿಯನ್ನು ಸಿದ್ಧಪಡಿಸಿ ಜಿಪಂ ಸಿಇಒ ಸುರೇಶ್ ಹಿಟ್ನಾಳ್ ಅವರಿಗೆ ಸಲ್ಲಿಸಿದ್ದರು. ವೈಷ್ಯಮ್ಯದಿಂದ ಷ್ಯಡ್ಯಂತ್ರ ಮಾಡಿದ ಹಿನ್ನೆಲೆ ಸಹ ಶಿಕ್ಷಕಿಯನ್ನು ಸಿಇಒ ಸುರೇಶ್ ಹಿಟ್ನಾಳ್ ಅವರು 2021 ನಿಯಮ 3(1) ಉಲ್ಲಂಘನೆ ಸಂಬಂಧ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಓದಿ: ಫೆ.25ರಂದು ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ: ವಸ್ತ್ರಸಂಹಿತೆ ಕಡ್ಡಾಯ