ಬೆಳಗಾವಿ: ಭಾರಿ ಮಳೆ ಸುರಿದು ಹಳ್ಳ-ಕೊಳ್ಳ ಉಕ್ಕಿ ಹರಿದ ಪರಿಣಾಮ, ಸವದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿಬಂದಿದೆ.
ಗುರುವಾರ ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಇಲ್ಲಿನ ಎಣ್ಣೆ ಹೊಂಡ ತುಂಬಿ ಹರಿದು ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿತು. ಇಡೀ ದೇವಸ್ಥಾನ ಜಲಾವೃತವಾಗಿ, ದೇವಿ ದರ್ಶನ ಪಡೆಯಲು ಆಗಮಿಸಿದ್ದ ರಾಜ್ಯ ಹಾಗೂ ಹೊರ ರಾಜ್ಯಗಳ ಭಕ್ತರು ಪರದಾಡಿದರು.
ಏಕಾಏಕಿ ಸುರಿದ ಭಾರಿ ಮಳೆ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಅವಾಂತರ ಸೃಷ್ಟಿಸಿದೆ. ಎಣ್ಣೆ ಹೊಂಡ ತುಂಬಿ ಹರಿದರೂ, ಈ ಹಿಂದೆ ಮಳೆ ನೀರು ಸರಾಗವಾಗಿ ಹರಿದು ಮುಂದೆ ಹೋಗುತ್ತಿತ್ತು. ಆದರೆ, ಈ ಬಾರಿ ಚರಂಡಿಗಳನ್ನು ಸ್ವಚ್ಛ ಮಾಡದೇ ಇದ್ದ ಪರಿಣಾಮ ದೇವಸ್ಥಾನಕ್ಕೆ ನೀರು ನುಗ್ಗಿದೆ. ಅಮವಾಸ್ಯೆ ಹಿನ್ನೆಲೆ, ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸಂಕಷ್ಟ ಅನುಭವಿಸಿದರು.
ಇದನ್ನೂ ಓದಿ: ಮುಂಗಾರು ಮಳೆ ರಾಜ್ಯದಲ್ಲಿ ಮತ್ತಷ್ಟು ಚುರುಕು; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - RAIN IN KARNATAKA
ಚಾಮರಾಜನಗರದಲ್ಲಿ ಮಳೆ ಅಬ್ಬರ: ಚಾಮರಾಜನಗರ ಜಿಲ್ಲೆಯಲ್ಲಿ ಗುರುವಾರ ಸಂಜೆ ಮಳೆರಾಯ ಬೊಬ್ಬಿರಿದಿದ್ದು, ಮುಂಗಾರು ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕು ಭಾಗದಲ್ಲಿ ಜೋರು ಮಳೆಯಾಗಿದೆ. ರಸ್ತೆಗಳ ಮೇಲೆ ಹೊಳೆಯಂತೆ ನೀರು ಹರಿದ ಪರಿಣಾಮ ವಾಹನ ಸಂಚಾರ ದುಸ್ತರವಾಗಿತ್ತು. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಕರ್ನಾಟಕ ಗಡಿಯಾದ ಪುಣಜನೂರು ಗೇಟ್ ನಲ್ಲೂ ವರುಣ ಆರ್ಭಟಕ್ಕೆ ವಾಹನ ಸವಾರರು ಪರದಾಡಿದರು.
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಸೇತುವೆ ಮೇಲೆ ನೀರು ಹರಿದ ಪರಿಣಾಮ ವಡ್ಡರ ಹೊಸಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದ್ ಆಗಿತ್ತು. ಅಣ್ಣೂರುಕೇರಿ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಅಣ್ಣೂರುಕೇರಿ ಗ್ರಾಮದ ಹಲವು ಬೀದಿಗಳು ಜಲಾವೃತವಾಗಿದೆ.
ಗುಂಡ್ಲುಪೇಟೆಯ ಹಾಲಹಳ್ಳಿ ಹಾಗೂ ತೊಂಡವಾಡಿ ಸಂಪರ್ಕ ರಸ್ತೆಯೇ ಮುಳುಗಡೆಯಾಗಿದ್ದು, ವಾಹನ ಸಂಚಾರ ಬಂದ್ ಆಗಿತ್ತು. ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಹಿರಿಕಾಟಿ ಗೇಟ್ನಲ್ಲಿ ನೀರು ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಕಷ್ಟಸಾಧ್ಯವಾಗಿತ್ತು. ಗುಂಡ್ಲುಪೇಟೆ ತಾಲೂನಿನ ಬೊಮ್ಮಲಾಪುರ, ಶಿವಪುರ, ನೇನೆಕಟ್ಟೆ, ಮಂಚಹಳ್ಳಿ ಭಾಗಗಳಲ್ಲಿ ಜೋರು ಮಳೆಗೆ ಜಮೀನುಗಳು ಜಲಾವೃತವಾಗಿದೆ.
ಕೆರೆ ಒಡೆಯುವ ಭೀತಿ: ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಮಳೆಗೆ ದೇವರಕೆರೆ ಹಾಗೂ ಅಗಸನ ಕಟ್ಟೆ ತುಂಬಿ ಏರಿ ಮೇಲೆ ನೀರು ಹರಿಯುತ್ತಿದೆ. ಕೆರೆ ನೀರಿನ ಪ್ರಮಾಣ ಹೆಚ್ಚುತ್ತಲ್ಲೇ ಇದ್ದು, ಕೋಡಿ ಸರಿಯಿಲ್ಲದ ಕಾರಣ ಏರಿ ಮೇಲೆ ನೀರು ಹರಿಯುತ್ತಿದೆ. ಕೆರೆಗಳು ಒಡೆಯುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ಕೆರೆಗಳು ಒಡೆದರೇ ರೈತರು ಬೆಳೆದ ನೂರಾರು ಎಕರೆ ಫಸಲು ನಾಶವಾಗುವ ಭೀತಿ ಎದುರಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹನೂರಲ್ಲಿ ಗೋಡೆ ಕುಸಿತ: ಮಳೆಗೆ ಹನೂರು ಪಟ್ಟಣದಲ್ಲಿ ಕುಮಾರ್ ಎಂಬುವರ ಮನೆಯ ಗೋಡೆ ಕುಸಿದು ಬಿದ್ದು, 50 ಸಾವಿರಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ನಾಶವಾಗಿರುವ ಘಟನೆ ಜರುಗಿದೆ. ಮನೆ ಗೋಡೆ ಕುಸಿದು ಹತ್ತಕ್ಕೂ ಹೆಚ್ಚು ಶೀಟ್ಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊಸದಾಗಿ ಮಳಿಗೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಏಕಾಏಕಿ ಗೋಡೆ ಕುಸಿದ ಪರಿಣಾಮ 10ಕ್ಕೂ ಹೆಚ್ಚು ಶೀಟ್ಗಳು ಜಖಂಗೊಂಡಿವೆ.