ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬರೋಬ್ಬರಿ 1,48,95,404 ರೂ. ಕಾಣಿಕೆ ಸಂಗ್ರಹವಾಗಿದೆ.
ಮೇ 25 ರಿಂದ ಜುಲೈ 20ರ (55 ದಿನಗಳಲ್ಲಿ) ಅವಧಿಯಲ್ಲಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಹುಂಡಿಯಲ್ಲಿ 1.35ಕೋಟಿ ರೂ. ಹಣ, 11.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.80 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಹಾಕಿ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು, ಮುಜರಾಯಿ ಇಲಾಖೆ ಬೆಳಗಾವಿ ಸಹಾಯಕ ಆಯುಕ್ತರ ಕಚೇರಿ ಅಧೀಕ್ಷಕರು, ಸವದತ್ತಿ ತಹಶೀಲ್ದಾರ ಕಚೇರಿ ಅಧಿಕಾರಿಗಳು, ಸವದತ್ತಿ ಠಾಣೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ದಿನ ಹುಂಡಿ ಹಣ ಎಣಿಸಲಾಯಿತು.
ಮಾಹಿತಿ ನೀಡಿರುವ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, "ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಈ ಬಾರಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಗುಡ್ಡಕ್ಕೆ ಬರುವ ಭಕ್ತರಿಗೆ, ಮೂಲಸೌಕರ್ಯ ಒದಗಿಸಲು ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಹುಂಡಿ ಎಣಿಕೆಯಲ್ಲಿ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಪಿ.ಬಿ. ಮಹೇಶ, ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮಿ ಹೂಲಿ, ನಾಗರತ್ನಾ ಚೋಳಿನ, ಬಾಳೇಶ ಅಬ್ಬಾಯಿ, ಎಂ.ಎಸ್.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಡಿ.ಆರ್.ಚವ್ಹಾಣ, ಅಲ್ಲಮಪ್ರಭು ಪ್ರಭುನವರ, ಸಿ.ಎನ್.ಕುಲಕರ್ಣಿ, ಆನಂದ ಗೊರವನಕೊಳ್ಳ, ಡಿ.ಡಿ. ನಾಗನಗೌಡ್ರ, ದೇವಸ್ಥಾನ ಸಿಬ್ಬಂದಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು.