ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರ ವಿಶ್ವವಿಖ್ಯಾತಿ ಪಡೆದಿದೆ. ಅದರ ಜೊತೆ ಜಿಲ್ಲೆಯ ಅನೇಕರು ರಾಜ್ಯ ಸೇರಿದಂತೆ ದೇಶಕ್ಕೆ ಕೀರ್ತಿ ತರುವಂತಹ ಸಾಧನೆ ಮಾಡುತ್ತಾರೆ. ಕ್ರಿಕೆಟ್, ವಿಜ್ಞಾನ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿದ್ದಾರೆ. ಇದೀಗ ಮತ್ತೊಂದು ಸಾಧನೆಯಿಂದ ಜಿಲ್ಲೆ, ರಾಜ್ಯದ ಹಿರಿಮೆಯನ್ನು ಹೆಚ್ಚಿದೆ.
ವಿಜಯಪುರ ಜಿಲ್ಲೆಯ ಯುವತಿ ಸಮೈರಾ ಹುಲ್ಲೂರ ತಮ್ಮ 18ನೇ ವಯಸ್ಸಿಗೆ ಕಮರ್ಶಿಯಲ್ ಪೈಲಟ್ ಲೈಸೆನ್ಸ್ (CPL) ಪಡೆಯುವ ಮೂಲಕ ದೇಶದ ಅತ್ಯಂತ ಕಿರಿಯ ಪೈಲಟ್ ಎನಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹಾಗೂ ತಾತ, ಅಜ್ಜಿ, ತಂದೆ, ತಾಯಿ ಹಾಗೂ ತಮ್ಮ ಎಲ್ಲರ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಸಮೈರಾಳ ಅಭೂತಪೂರ್ವ ಸಾಧನೆಯಿಂದ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಸಮೈರಾ ಪ್ರಾಥಮಿಕ, ಪ್ರೌಢ, ಹಾಗೂ ಪದವಿಪೂರ್ವ ವಿದ್ಯಾಭ್ಯಾಸವನ್ನು ವಿಜಯಪುರದಲ್ಲಿ ಮುಗಿಸಿದ್ದಾರೆ. ನಂತರ ನೇರವಾಗಿ ದೆಹಲಿಯಲ್ಲಿ 6 ತಿಂಗಳ ಪೈಲಟ್ ಟ್ರೈನಿಂಗ್ ಮುಗಿಸಿ 18ನೇ ವಯಸ್ಸಿಗೆ ಪೈಲಟ್ ಆಗಿದ್ದಾರೆ. ಇನ್ನು 25ನೇ ವಯಸ್ಸಿಗೆ ಪೈಲಟ್ ಆದ ಕ್ಯಾಪ್ಟನ್ ತಪೇಶ್ ಕುಮಾರ್ ಅವರಿಂದ ಪ್ರೇರಣೆ ಪಡೆದು, ಇವತ್ತು ಈ ಸಾಧನೆ ಮಾಡಿರುವುದು ಮಾತ್ರವಲ್ಲದೇ ಅವರ ದಾಖಲೆಯನ್ನು ಮುರಿದು ಮುಂದೆ ಸಾಗಿದ್ದಾರೆ.
ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ. ಹೆಣ್ಣು ಮಕ್ಕಳೆಂದರೆ ಕಡೆಗಣಿಸುವವರಿಗೆ ಸಮೈರಾ ಕುಟುಂಬ ಹಾಗೂ ಇಂದಿನ ಯುವ ಪೀಳಿಗೆಗೆ ಸಮೈರಾ ಸಾಧನೆ ಮಾದರಿ ಆಗಿದೆ.
ಮಗಳ ಸಾಧನೆ ಹೆಮ್ಮೆಯ ವಿಷಯ: ಸಮೈರಾ ಅವರ ತಂದೆ ಅಮೀನ್ ಹುಲ್ಲೂರ ಮಾತನಾಡಿ, "ಮಗಳು ಪಿಯುಸಿ ಪರೀಕ್ಷೆ ಬರೆಯುವ ಮೊದಲೇ ಡಿಜಿಸಿಎ (Directorate General of Civil Aviation) ಪರೀಕ್ಷೆ ಬರೆಯಲು ಅರ್ಹಳಾಗಿದ್ದಳು. ಆದರೆ ಪಿಯುಸಿ ಫಲಿತಾಂಶದ ನಂತರವೇ ಡಿಜಿಸಿಎ ಪರೀಕ್ಷೆಗೆ ಅರ್ಜಿ ಹಾಕಿದ್ದು. ಒಂದೇ ಪ್ರಯತ್ನಕ್ಕೆ ಐದೂ ಪರೀಕ್ಷೆಗಳನ್ನು ಪಾಸ್ ಮಾಡಿದ್ದಳು. ಕೊನೆಯ ಒಂದು ಪರೀಕ್ಷೆಗೆ 18 ವರ್ಷ ವಯಸ್ಸಿನ ಮಿತಿ ಇತ್ತು. ಹಾಗಾಗಿ ಅದೊಂದು ಬಾಕಿ ಇತ್ತು. ಅದರ ಜೊತೆಗೆ 200 ಗಂಟೆ ಅವಧಿಯ ಫ್ಲೈಯಿಂಗ್ ಟ್ರೈನಿಂಗ್ ಇತ್ತು. ಅದನ್ನು ಸಮೈರಾ 6 ತಿಂಗಳಲ್ಲಿ ಮುಗಿಸಿಕೊಂಡು ಬಂದಿದ್ದಾಳೆ. ಅದೊಂದು ದಾಖಲೆ. 18 ವರ್ಷಕ್ಕೆ ಮಗಳು ಈ ಸಾಧನೆಯನ್ನು ಮಾಡಿರುವುದು ನಮಗೆ ಮಾತ್ರ ಅಲ್ಲಿ ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯ." ಎಂದು ಸಂತಸ ಹಂಚಿಕೊಂಡರು.
ತಂದೆ, ತಾಯಿಯ ಪ್ರೋತ್ಸಾಹ: "ನಾನು ದೇಶದ ಅತ್ಯಂತ ಕಿರಿಯ ಪೈಲಟ್ಗಳಲ್ಲಿ ಒಬ್ಬಳು ಎನ್ನುವ ದಾಖಲೆ ನಿರ್ಮಿಸಿದ್ದೇನೆ. ಸಿಪಿಎಲ್ ಹೊಂದಿರುವ ಕರ್ನಾಟಕದ ಅತ್ಯಂತ ಕಿರಿಯ ಪೈಲಟ್ ಆಗಿದ್ದೇನೆ. ಪೈಲಟ್ ಆಗಬೇಕು ಎನ್ನುವ ಕನಸಿತ್ತು. ಹಾಗಾಗಿ ದ್ವಿತೀಯ ಪಿಯುಸಿ ಮುಗಿದ ತಕ್ಷಣ ಪರೀಕ್ಷೆ ಬರೆಯಲು ದೆಹಲಿಗೆ ಹೋಗಿ, ಐದು ಪರೀಕ್ಷೆಗಳನ್ನು ಪಾಸ್ ಆಗಿದ್ದೆ. ಆದರೆ ಇನ್ನೊಂದು ಪರೀಕ್ಷೆಗೆ ನನಗೆ 18 ವರ್ಷ ಆಗಿರಬೇಕಿತ್ತು. ಆಗಿರದ ಕಾರಣ ನಾನು ಕಾರವಾರಕ್ಕೆ ಹೋಗಿ ಅಲ್ಲಿ ಟ್ರೈನಿಂಗ್ ಮುಗಿಸಿ, ಎಸ್ಪಿಎಲ್ (Student Pilot License) ಗಳಿಸಿದೆ. 18 ವರ್ಷ ಆದ ಬಳಿಕ ಕೊನೆಯ ಪರೀಕ್ಷೆ ಬರೆದು, ಟ್ರೈನಿಂಗ್ ಮುಗಿಸಿದೆ. ಅಪ್ಪ ಅಮ್ಮ ನನ್ನ ಸಾಧನೆಯಿಂದ ತುಂಬಾ ಖುಷಿಯಾಗಿದ್ದಾರೆ. ಸಣ್ಣ ವಯಸ್ಸಿನಿಂದಲೇ ನನಗೆ ಅಪ್ಪ ಅಮ್ಮ ಎಲ್ಲದಕ್ಕೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ." ಎಂದು ಖುಷಿ ಹಂಚಿಕೊಂಡರು.
ಇದನ್ನೂ ಓದಿ: IPLಗೆ ದಾರಿ ತೋರಿದ ಸೈಕಲ್: ಮೈಸೂರು ಯುವ ಕ್ರಿಕೆಟಿಗ ಮನ್ವಂತ್ ಸಾಧನೆ ಬಗ್ಗೆ ತಂದೆ - ತಾಯಿ ಹೇಳುವುದೇನು?