ಬೆಂಗಳೂರು: "ಬಿಜೆಪಿ ಶಾಸಕರಾಗಿದ್ದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಎಸ್.ಟಿ.ಸೋಮಶೇಖರ್ ತಮ್ಮ ರಾಜಕೀಯ ಜೀವನದಲ್ಲಿ ಅತೀದೊಡ್ಡ ತಪ್ಪು ಮಾಡುತ್ತಿದ್ದಾರೆ. ಇದಕ್ಕವರು ಮುಂದಿನ ದಿನಗಳಲ್ಲಿ ತಕ್ಕ ಪ್ರತಿಫಲ ಅನುಭವಿಸುತ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಇದರ ಬಗ್ಗೆ ಬರುವ ದಿನಗಳಲ್ಲಿ ನೋಡುತ್ತೀರಿ. ಅವರ ರಾಜಕೀಯ ಜೀವನದಲ್ಲಿ ದೊಡ್ಡ ತಪ್ಪು ಮಾಡಿದ್ದಾರೆ. ಮೋದಿ ಪ್ರಧಾನಿಯಾಗಿರುವಾಗ, ಅಮಿತ್ ಶಾ ಗೃಹ ಸಚಿವರಾಗಿರುವ ವೇಳೆ ಸೋಮಶೇಖರ್ ಇಂಥ ದೊಡ್ಡ ತಪ್ಪು ಮಾಡಿದ್ದಾರೆ. ಮುಂದೆ ಅದರ ಪ್ರತಿಫಲ ಅನುಭವಿಸಲಿದ್ದಾರೆ" ಎಂದರು.
"ಕೇಂದ್ರದ ಅನುದಾನ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ನಿರೀಕ್ಷೆ ಮಾಡಿಲ್ಲ. ರಾಜ್ಯಕ್ಕೆ ನಿಮ್ಮ ಕೊಡುಗೆ ಏನು? 9 ತಿಂಗಳುಗಳಲ್ಲಿ ರಾಜ್ಯಕ್ಕೆ ನೀವೇನು ಕೊಟ್ಟಿದ್ದೀರಿ? ಬರ ಪರಿಹಾರ ಕೊಡಲು ಸಾಧ್ಯವಾಗಿದೆಯಾ? ರೈತರಿಗೆ ನ್ಯಾಯ ಕೊಡುವ ಕೆಲಸ ಆಗಿದೆಯಾ? ಉತ್ತರಿಸಿ. ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದು, ಹಣಕಾಸು ಸಚಿವರಿಗೆ ಚರ್ಚೆಗೆ ಆಹ್ವಾನ ನೀಡುವುದು ಸಿಎಂಗೆ ಶೋಭೆ ತರುವ ವಿಷಯವಲ್ಲ. ಉಡಾಫೆ ವರ್ತನೆ ಬಿಟ್ಟು ನೀವೇನು ಮಾಡಿದ್ದೀರಿ ಹೇಳಿ?" ಎಂದು ಹೇಳಿದರು.
"ಕಾಂಗ್ರೆಸ್ ಹತಾಶೆಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಐದು ಗ್ಯಾರಂಟಿಗಳಿಂದ ಉಪಯೋಗ ಆಗಲ್ಲ ಎನ್ನುವುದು ಗೊತ್ತಾಗಿ, ಈಗ ಹೊಸ ರೀತಿಯಲ್ಲಿ ಪೊಳ್ಳು ಭರವಸೆ ನೀಡಿದ್ದಾರೆ. ಇದಕ್ಕೆಲ್ಲಾ ಜನತೆ ಮರುಳಾಗಲ್ಲ. ಜನರಿಗೆ ಸ್ಪಷ್ಟತೆ ಇದೆ. ಮೋದಿ ಪ್ರಧಾನಿ ಆಗಲಿ ಎನ್ನುವ ಅಪೇಕ್ಷೆ ಹೊಂದಿದ್ದಾರೆ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು? ಮೋದಿಗೆ ಎದುರಾಗಿ ನಿಲ್ಲುವ ಯಾವ ಫೇಸ್ ಇದೆ? ಈ ಬಾರಿ ಇಡೀ ದೇಶದಲ್ಲಿ 100 ಸ್ಥಾನ ಅಲ್ಲ 40 ಸ್ಥಾನವನ್ನೂ ಕಾಂಗ್ರೆಸ್ ದಾಟಲ್ಲ" ಎಂದು ಟೀಕಿಸಿದರು.
ಇದನ್ನೂ ಓದಿ: ಅಧಿಕೃತವಾಗಿ ಬಿಜೆಪಿ ಸೇರಿದ ಸಂಸದೆ ಸುಮಲತಾ ಅಂಬರೀಶ್ - MP Sumalata joined BJP