ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಶಮನ ಮಾಡುವಲ್ಲಿ ಕಡೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಫಲವಾಗಿದೆ. ರೆಬೆಲ್ ನಾಯಕರು ಮತ್ತು ರಾಜ್ಯ ನಾಯಕರನ್ನು ಕರೆಸಿಕೊಂಡು ಸಂಧಾನ ಸಭೆ ನಡೆಸಿದ ಸಂಘ ಪರಿವಾರದ ನಾಯಕರು, ಪಕ್ಷದಲ್ಲಿನ ಆಂತರಿಕ ಕಲಹಕ್ಕೆ ತೆರೆ ಎಳೆಯುವಲ್ಲಿ ಬಹುತೇಕ ಸಫಲರಾಗಿದ್ದಾರೆ. ಸಂಘದ ಮಧ್ಯಸ್ಥಿಕೆಗೆ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸಂತೃಪ್ತಿಗೊಂಡಿದ್ದು, ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಎನ್ನುವ ಘೋಷಣೆಯೊಂದಿಗೆ ಯಡಿಯೂರಪ್ಪ ಕುಟುಂಬದ ವಿರುದ್ಧದ ಕಲಹಕ್ಕೆ ಕದನ ವಿರಾಮ ಘೋಷಿಸಿದ್ದಾರೆ.
ಸಭೆಯಲ್ಲಿ ಈ ಎಲ್ಲ ನಾಯಕರು ಇದ್ದರು: ಸದಾಶಿವನಗರದಲ್ಲಿರುವ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಆರ್ಎಸ್ಎಸ್ ಸರಸಹಕಾರ್ಯವಾಹ ಮುಕುಂದ್, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಸಮಧಾನಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದೆ ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ, ಸುನೀಲ್ ಕುಮಾರ್ ಸೇರಿ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
ಪಕ್ಷದಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರದ ಬೆಳವಣಿಗೆಗಳ ಕುರಿತು ಅವಲೋಕನ ನಡೆಸಲಾಯಿತು. ಪದಾಧಿಕಾರಿಗಳ ನೇಮಕ, ಪ್ರಮುಖ ನಿರ್ಧಾರಗಳ ವಿಚಾರ ಸೇರಿದಂತೆ ಪಕ್ಷದ ಚಟುವಟಿಕೆಗಳ ನಿರ್ವಹಣೆ ವಿರುದ್ಧ ಕೇಳಿಬಂದ ಅಸಮಾಧಾನಗಳ ಕುರಿತು ಸಮಾಲೋಚನೆ ನಡೆಯಿತು. ಯತ್ನಾಳ್ ಬಣದ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿಜಯೇಂದ್ರ, ಅಶೋಕ್ ಸೇರಿದಂತೆ ಇತರರ ಅಭಿಪ್ರಾಯವನ್ನೂ ಸಂಘದ ಪ್ರಮುಖರು ಪಡೆದುಕೊಂಡರು. ಎಲ್ಲ ಆಯಾಮದಲ್ಲಿಯೂ ಸಮಚಿತ್ತದಿಂದ ವಿಚಾರಗಳನ್ನು ಆಲಿಸಿದ ಸಂಘದ ನಾಯಕರು, ಮೊದಲು ಮುಷ್ಠಿಯಂತೆ ಒಗ್ಗಟ್ಟಾಗಿ ನಂತರ ಎದುರಾಳಿ ವಿರುದ್ಧ ಹೋರಾಟ ನಡೆಸಬೇಕು. ಎಲ್ಲರೂ ಪ್ರತ್ಯೇಕವಾಗಿ ಹೋದರೆ ಗೆಲುವು ಎಂದಿಗೂ ಸಿಗುವುದಿಲ್ಲ. ಮೊದಲು ನಮ್ಮಲ್ಲಿನ ತಪ್ಪು ಸರಿಪಡಿಸಿಕೊಂಡು, ಬಳಿಕ ಬೇರೆಯವರ ತಪ್ಪಿನತ್ತ ಬೆರಳು ತೋರಬೇಕು ಎನ್ನುವ ಸಲಹೆ ನೀಡಿದರು.
ಸಮಸ್ಯೆ ಆಲಿಸಿಕೊಂಡು ಪಕ್ಷ ಮುನ್ನಡೆಸಿ: ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು, ಏಕಪಕ್ಷೀಯ ನಿರ್ಧಾರಗಳಿರಬಾರದು. ಪಕ್ಷಕ್ಕೆ ದುಡಿದವರ ಕಡೆಗಣನೆ ಸಲ್ಲದು. ಎಲ್ಲರ ಸಮಸ್ಯೆಗಳನ್ನೂ ಆಲಿಸಿಕೊಂಡು ಪಕ್ಷವನ್ನು ಮುನ್ನಡೆಸಿ, ಸಂಘಟಿಸಿ ಎಂದು ಸಲಹೆ ನೀಡಿದರು. ಅದರಂತೆಯೇ, ಪಕ್ಷದ ಹಿರಿಯ ನಾಯಕರ ವಿರುದ್ಧ ಬಹಿರಂಗ ಅಸಮಾಧಾನ ಸಲ್ಲದು. ಅದಕ್ಕಾಗಿಯೇ ಇರುವ ವೇದಿಕೆ ಬಳಸಿಕೊಳ್ಳಬೇಕು ಎಂದು ಸೂಚ್ಯವಾಗಿ ಯತ್ನಾಳ್ಗೂ ಹೇಳಿದರು ಎನ್ನಲಾಗಿದೆ. ಇದಕ್ಕೆ ಎಲ್ಲ ನಾಯಕರು ಒಪ್ಪಿಗೆ ನೀಡಿದರು. ಶಾಸಕ ಬಸನಗೌಡ ಪಾಟೀಲ್ ಕೂಡ ಸಂಘದ ಈ ಮಾತಿಗೆ ಸಹಮತ ವ್ಯಕ್ತಪಡಿಸಿ, ಪಕ್ಷದ ವ್ಯಾಪ್ತಿಯೊಳಗಡೆಯೇ ನನ್ನ ನಿಲುವು ಇರಲಿದೆ. ಪಕ್ಷದ ನಿರ್ಧಾರಗಳನ್ನು ಒಪ್ಪುತ್ತೇನೆ ಎನ್ನುವ ಆಶ್ವಾಸನೆ ನೀಡಿದರು. ಸಂಘದ ಮಧ್ಯಸ್ಥಿಕೆಯಿಂದಾಗಿ ಬಿಜೆಪಿಯಲ್ಲಿನ ಆಂತರಿಕ ಕಲಹಕ್ಕೆ ತಾತ್ಕಾಲಿಕ ತೆರೆ ಬಿದ್ದಿದ್ದು, ಒಗ್ಗಟ್ಟಿನ ಮಂತ್ರ ಪಠಣ ಆರಂಭಿಸಿದ್ದಾರೆ.
ಪಕ್ಷ, ದೇಶ, ಸನಾತನ ಹಿಂದೂ ಧರ್ಮಕ್ಕೂ ನಿಷ್ಠೆ: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ''ಇಂದು ನಾವೆಲ್ಲರೂ ಬಹಳ ಖುಷಿಯಾಗಿದ್ದೇವೆ. ನಮ್ಮ ಭಾವನೆಗಳನ್ನು ಕೇಳುವಂತಹ ವೇದಿಕೆ ಸಿಕ್ಕಿತ್ತು, ನಮಗೆ ಬಹಳ ಸಂತೋಷವಾಗಿದೆ. ಎಲ್ಲ ವಿಚಾರಗಳೂ ಒಳ್ಳೆಯ ವಾತಾವರಣದಲ್ಲಿ ಚರ್ಚೆ ಆಗಿದೆ. ಎಲ್ಲರ ಮನಸ್ಸಲ್ಲಿ ಇರುವುದನ್ನು ಹೇಳುವುದಕ್ಕೆ ಅವಕಾಶ ಸಿಕ್ಕಿತು. ಎಲ್ಲರೂ ಕೂಡ ಒಟ್ಟಾಗಿ ಹೋಗುತ್ತೇವೆ. ಪಕ್ಷ ಹೇಳಿದ ಕಡೆ ಹೋಗುತ್ತೇವೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಾದಯಾತ್ರೆಯು ಪಕ್ಷದ ವೇದಿಕೆಯ ಒಳಗೆಯೇ ಇದೆ, ನೀವೇ ತಪ್ಪು ತಿಳಿದುಕೊಂಡಿದ್ದೀರಿ. ನಾವು ನಿಷ್ಠಾವಂತ ಬಿಜೆಪಿಯವರು, ಭಾಜಪ ಅಂತಾ ನಮ್ಮದು ಒಂದು ಗುಂಪು ಇದೆ. ಪಕ್ಷಕ್ಕೆ ನಿಷ್ಠೆ, ದೇಶಕ್ಕೆ ನಿಷ್ಠೆ, ಸನಾತನ ಹಿಂದೂ ಧರ್ಮಕ್ಕೂ ನಿಷ್ಠೆ ಇದೆ'' ಎಂದರು.
ರಾಜ್ಯಾಧ್ಯಕ್ಷರ ಜೊತೆ ಕೈ ಜೋಡಿಸುತ್ತೀರಾ ಎಂಬ ಪ್ರಶ್ನೆಗೆ, ''ಪಕ್ಷದ ನಿರ್ಣಯಕ್ಕೆ ನಾವೆಲ್ಲರೂ ಬದ್ಧ. ತಲೆ ಬಾಗುತ್ತೇವೆ. ಅರವಿಂದ್ ಲಿಂಬಾವಳಿಗೆ ಎಲ್ಲಾ ಅಧಿಕಾರವನ್ನು ಕೊಟ್ಟಿದ್ದೇವೆ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ, ಏನು ಆಗುತ್ತೆ ಅಂತಾ ನೋಡೋಣ'' ಎಂದು ಯತ್ನಾಳ್ ಪ್ರತಿಕ್ರಿಯಿಸಿದರು.
ಸರ್ಕಾರ ವಿಸರ್ಜನೆ ಆಗುವುದು ಖಚಿತ: ''ವಾಲ್ಮೀಕಿ ಹಗರಣದ ವಿರುದ್ಧ ಬಳ್ಳಾರಿ ಪಾದಯಾತ್ರೆ ವಿಚಾರದಲ್ಲಿ ಎಲ್ಲರೂ ಕೂತು ನಿರ್ಣಯ ಮಾಡುತ್ತೇವೆ. ವಾಲ್ಮೀಕಿ ಹಗರಣ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ನಡೆದಿದೆ. ನಾಚಿಕೆ ಮಾನ ಮರ್ಯಾದೆ ಇಲ್ಲದ ರೀತಿಯಲ್ಲಿ ಮಂತ್ರಿಗಳು ಭ್ರಷ್ಟಾಚಾರ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅಮೆರಿಕಕ್ಕೆ ಹೋಗಿದ್ದಾರೆ. ಅಲ್ಲಿ ರಾಹುಲ್ ಗಾಂಧಿ ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನ ಫಿಕ್ಸ್ ಮಾಡಲು ಹೋಗಿದ್ದಾರೆ. ತಿಂಗಳಿಗೆ ಎಷ್ಟು ಮಾಮೂಲಿ ಕೊಡಬೇಕು ಎಂದು ನಿರ್ಣಯ ಮಾಡಲು ಅಲ್ಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಖಚಿತ. ನಾನು ಸಿಎಂ ಆಗುವುದು ನಿಶ್ಚಿತ ಎನ್ನುವಂತೆ ಡಿಸಿಎಂ ವರ್ತಿಸುತ್ತಿದ್ದಾರೆ. ಆದರೆ, ಆ ನಂತರ ಸರ್ಕಾರ ವಿಸರ್ಜನೆ ಆಗುವುದು ಅತ್ಯಂತ ಖಚಿತ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಯತ್ನಾಳ್ ಟಾಂಗ್ ಕೊಟ್ಟರು.
''ಸುಪ್ರೀಂಕೋರ್ಟ್ನಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಸುಪ್ರೀಂಕೋರ್ಟ್ನಲ್ಲಿ ಹೋರಾಟ ಮುಂದುವರಿಸುತ್ತಿದ್ದೇನೆ, ಸಿಬಿಐನವರಿಗೂ ಅರ್ಜಿ ಹಾಕಿ ಅಂತಾ ನಾವು ಮನವಿ ಮಾಡಿದ್ದೇವೆ. ಬಹುಶಃ 17ರಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಬರಬಹುದು. ನಮ್ಮ ವಕೀಲರ ಜೊತೆಗೂ ನಾನು ಚರ್ಚೆ ಮಾಡಿದ್ದೇನೆ'' ಎಂದು ತಿಳಿಸಿದರು.