ಬೆಂಗಳೂರು: ಕ್ರೆಡಿಟ್ ಕಾರ್ಡ್ ಕೊಡುವುದಾಗಿ ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ಉದ್ಯಮಿಯೊಬ್ಬರಿಗೆ ಕರೆ ಮಾಡಿದ ಖದೀಮನೋರ್ವ ಬರೋಬ್ಬರಿ 72.06 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆನಗರದಲ್ಲಿ ಬೆಳಕಿಗೆ ಬಂದಿದೆ. ಬಸವರಾಜು ಎಂಬ ಉದ್ಯಮಿಯೊಬ್ಬರಿಗೆ ವಂಚಿಸಲಾಗಿದ್ದು, ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ಏಪ್ರಿಲ್ 1 ರಂದು ಖಾಸಗಿ ಬ್ಯಾಂಕ್‌ವೊಂದರ ಕ್ರೆಡಿಟ್ ಕಾರ್ಡ್ ವಿಭಾಗದ ಪ್ರತಿನಿಧಿಯೆಂದು ಬಸವರಾಜು ಅವರಿಗೆ ಕರೆ ಮಾಡಿದ್ದ ವಂಚಕ, ''ನಿಮ್ಮ ಬ್ಯಾಂಕ್ ವಹಿವಾಟು ಉತ್ತಮವಾಗಿದೆ. ಆದ್ದರಿಂದ ನಾವು ನಿಮಗೆ ಉಚಿತವಾಗಿ ಕ್ರೆಡಿಟ್ ಕಾರ್ಡ್ ನೀಡುತ್ತೇವೆ'' ಎಂದು ನಂಬಿಸಿದ್ದ. ''ಇದಕ್ಕಾಗಿ ಮೊಬೈಲ್ ನಂಬರ್ ಅಥೆಂಟಿಫಿಕೇಷನ್ ಅಗತ್ಯವಿದೆ'' ಎಂದಾಗ ಕೊಂಚ ಅನುಮಾನಗೊಂಡ ಬಸವರಾಜು ನಿರಾಕರಿಸಿದ್ದರು.
ಬಳಿಕ ''ಬ್ಯಾಂಕ್ ವತಿಯಿಂದಲೇ ನಿಮಗೆ ಒಂದು ಮೊಬೈಲ್ ಕಳುಹಿಸಿಕೊಡುತ್ತೇವೆ. ಅದರಲ್ಲಿ ನಿಮ್ಮ ಸಿಮ್ ಕಾರ್ಡ್ ಹಾಕಿ ರಿಜಿಸ್ಟರ್ ಮಾಡಿಸಿಕೊಳ್ಳಿ'' ಎಂದಿದ್ದ ವಂಚಕ ಕರೆಯನ್ನು ಸ್ಥಗಿತಗೊಳಿಸಿದ್ದ. ಇದಾದ ಸ್ವಲ್ಪ ಸಮಯದ ಬಳಿಕ ಬಸವರಾಜು ಅವರ ಕಂಪನಿಯ ವಿಳಾಸಕ್ಕೆ ಕೋರಿಯರ್ ಮೂಲಕ ಮೊಬೈಲ್ ಫೋನ್‌ವೊಂದನ್ನು ವಂಚಕ ಕಳಿಸಿದ್ದ. ಅದನ್ನು ನಿಜವೆಂದು ನಂಬಿದ ಬಸವರಾಜು, ಅದೇ ಫೋನ್‌ನಲ್ಲಿ ತಮ್ಮ ಸಿಮ್ ಬಳಸಲಾರಂಭಿಸಿದ್ದರು. ಆದರೆ, ಏಪ್ರಿಲ್ 26 ರಂದು ಬಸವರಾಜು ಅವರ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ನಿಂದ ಹಂತ-ಹಂತವಾಗಿ ಒಟ್ಟು 72.06 ಲಕ್ಷ ರೂ. ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಂಚನೆಗೆ ಒಳಗಾಗಿರುವುದನ್ನು ಅರಿತ ಬಸವರಾಜು ತಕ್ಷಣ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.