ಮೈಸೂರು: ದಸರಾ ಗಜಪಡೆಯಲ್ಲಿ ಎರಡು ವರ್ಷದಿಂದ ಅರಮನೆಗೆ ಆಗಮಿಸುತ್ತಿರುವ ರಾಜವಂಶಸ್ಥರ ಪ್ರೀತಿಯ ಆನೆ ರೋಹಿತ್ ಹಾಗೆಯೇ ಹಿರಿಯ ಆನೆ ವರಲಕ್ಷ್ಮಿ, ದೊಡ್ಡ ಹರವೆ ಲಕ್ಷ್ಮಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಅವಕಾಶ ದೊರೆಯಲಿಲ್ಲ.
ಸಾಲಾನೆಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರೋಹಿತ್ ಆನೆಯನ್ನು, ವಯಸ್ಸಾದ ಹಿನ್ನೆಲೆಯಲ್ಲಿ ವರಲಕ್ಷ್ಮಿ ಆನೆಯನ್ನು, ಕುಮ್ಮಿ ಆನೆಗಳಾಗಿ ಲಕ್ಷ್ಮಿ ಹಾಗೂ ಹಿರಣ್ಯ ಆನೆಯನ್ನು ಬಳಸಿಕೊಂಡ ಕಾರಣ ದೊಡ್ಡ ಹರವೆ ಲಕ್ಷ್ಮಿ ಆನೆಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಗಲಿಲ್ಲ.
ತಮ್ಮ ಆನೆಗಳನ್ನು ಜಂಬೂಸವಾರಿಗೆ ಬಳಿಸಿಕೊಳ್ಳದೇ ಇರುವುದಕ್ಕೆ ಮಾವುತರು ಹಾಗೂ ಕಾವಾಡಿಗರು ಬೇಸರ ವ್ಯಕ್ತಪಡಿಸದೇ ಅರಣ್ಯಾಧಿಕಾರಿಗಳ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ.
"ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಲಕ್ಷಾಂತರ ಜನರ ಮಧ್ಯೆ ನಮ್ಮ ಆನೆಯನ್ನು ಕರೆದುಕೊಂಡು ಹೋಗಬೇಕೆನ್ನುವ ಆಸೆ ಇತ್ತು. ಆದರೆ, ಸಾಲಾನೆಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಮ್ಮ ಆನೆಯನ್ನು ಕೈಬಿಟ್ಟಿದ್ದಾರೆ. ಇದರಿಂದ ಬೇಸರವಿಲ್ಲ. ಮುಂದಿನ ಬಾರಿ ಅವಕಾಶ ಸಿಗುವ ವಿಶ್ವಾಸವಿದೆ" ಎಂದು ರೋಹಿತ್ ಆನೆಯ ಮಾವುತ ಸೈಯದ್ ಉಸ್ಮಾನ್ ಹೇಳಿದರು.
"ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯ ತಂಡದೊಂದಿಗೆ ರೋಹಿತ್ ಆನೆಗೂ ತಾಲೀಮು ನೀಡಲಾಗಿತ್ತು. ಕುಶಾಲತೋಪು ಶಬ್ಧಕ್ಕೂ ಬೆಚ್ಚದೇ, ಜನಸಂದಣಿಗೆ ಹೆದರದೇ ರೋಹಿತ್ ಆರಾಮವಾಗಿದ್ದ. ಕಳೆದ ವರ್ಷ ಅರಮನೆಗೆ ಆಗಮಿಸಿದ್ದ ರೋಹಿತ್ ಹೊಸ ಆನೆಯೆಂದು ಜಂಬೂಸವಾರಿ ಮೆರವಣಿಗೆಗೆ ಕರೆದುಕೊಂಡು ಹೋಗಿರಲಿಲ್ಲ. ಇದೀಗ ಎರಡನೇ ಬಾರಿಯೂ ಅವಕಾಶ ಸಿಗಲಿಲ್ಲ. ಮೂರನೇ ವರ್ಷ ಬಳಸಿಕೊಳ್ಳುವ ನಂಬಿಕೆ ಇದೆ" ಎಂದು ಅವರು ತಿಳಿಸಿದರು.
ರಾಜವಂಶಸ್ಥರ ಪ್ರೀತಿಯ ಆನೆ ರೋಹಿತ್: ರೋಹಿತ್‌ಗೂ ಅರಮನೆಗೂ ವಿಶೇಷ ನಂಟಿದೆ. 2002ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಡಿಯಾಲದಲ್ಲಿ ತಾಯಿ ಆನೆಯಿಂದ ಹಾಗೂ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಆರು ತಿಂಗಳ ಮರಿಯಾನೆಯನ್ನು ಅರಣ್ಯ ಇಲಾಖೆಯಿಂದ ಪಡೆದು ರಾಜವಂಶಸ್ಥೆ ವಿಶಾಲಾಕ್ಷ್ಮಿ ದೇವಿ ಒಡೆಯರ್ ಬಂಡೀಪುರದಲ್ಲಿರುವ ತಮ್ಮ ರೆಸಾರ್ಟ್‌ನಲ್ಲಿ ಸಾಕಿದ್ದರು. 12 ವರ್ಷಗಳ ಹಿಂದೆ ಆನೆಯನ್ನು ಇಲಾಖೆಗೆ ನೀಡಿದ್ದರು.
ವಿಶಾಲಾಕ್ಷಿ ದೇವಿ ಒಡೆಯರ್ ಪುತ್ರಿಯಾದ ಶೃತಿ ಕೀರ್ತಿ ದೇವಿ ಒಡೆಯರ್ ಅವರು, ಮಗುವಿನ ಮೇಲಿರುವಷ್ಟು ಕಾಳಜಿಯನ್ನೇ ರೋಹಿತ್ ಮೇಲೆ ತೋರುತ್ತಾರೆ. ಕಳೆದ ವರ್ಷ ಆನೆ ಅರಮನೆಗೆ ಬಂದಿದ್ದಾಗ, ಆತ ಹೋಗುವವರೆಗೂ ಮುತುವರ್ಜಿ ವಹಿಸಿದ್ದರು. ಈ ವರ್ಷವೂ ಪ್ರತಿದಿನ ಆನೆಯ ಯೋಗಕ್ಷೇಮ ವಿಚಾರಿಸಿದ್ದಾರೆ.
ಇದನ್ನೂ ಓದಿ: ಅದ್ಧೂರಿ, ಅಚ್ಚುಕಟ್ಟಾದ ಮೈಸೂರು ದಸರಾ: ಜಿಲ್ಲಾಡಳಿತದ ಶ್ರಮ, ಶಿಸ್ತಿಗೆ ಸಿಎಂ ಅಭಿನಂದನೆ