ಬೆಳಗಾವಿ: ವೈದ್ಯಕೀಯ ವಿಜ್ಞಾನದಲ್ಲಿ ನಿಖರವಾದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ರೊಬೊಟಿಕ್ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಿದೆ. ರೊಬೊಟ್ ನಿಂದ ಇಬ್ಬರು ರೋಗಿಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ಉತ್ತರ ಕರ್ನಾಟಕದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಪಾತ್ರವಾಗಿದೆ.
ಈಗಾಗಲೇ ಬೆಂಗಳೂರಿನ ಕೆಲ ಆಸ್ಪತ್ರೆಗಳಲ್ಲಿ ರೊಬೊಟಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ. ಇದಾದ ಬಳಿಕ ಈಗ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲೂ ಈ ವಿಧಾನ ಅಳವಡಿಸಲಾಗಿದೆ. ಭಾರತದಲ್ಲಿಯೇ ತಯಾರಿಸಿದ ಎಸ್ಎಸ್ಐ ತಂತ್ರಜ್ಞಾನ ಸರ್ಜಿಕಲ್ ರೊಬೊಟಿಕ್ ಇದಾಗಿದ್ದು, ಅತ್ಯಂತ ನಿಖರತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವಲ್ಲಿ ಸಹಕಾರಿಯಾಗಿದೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ, ಕಳೆದ ಮೂರು ದಶಕಗಳ ಹಿಂದೆ ವೈದ್ಯವಿಜ್ಞಾನದ ತಂತ್ರಜ್ಞಾನಕ್ಕೆ ಪರಿಚಿತವಾದ ರೊಬೊಟಿಕ್ ಇಂದು ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಅದ್ಭುತ ಕೊಡುಗೆ ನೀಡುತ್ತ ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಿದೆ.
ರೊಬೊಟಿಕ್ ನಿಂದ ವೈದ್ಯರು ಅತ್ಯಂತ ಕ್ಲಿಷ್ಟಕರವಾದ ಹಾಗೂ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಸಹಕಾರಿಯಾಗಲಿದೆ. ಈಗಾಲೇ ರೊಬೊಟಿಕ್ ತಂತ್ರಜ್ಞಾನವನ್ನು ವಿವಿಧ ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ಕಳೆದ ಎರಡು ದಶಕಗಳಲ್ಲಿ ರೊಬೊಟಿಕ್ ತಂತ್ರಜ್ಞಾನವು ಆರೋಗ್ಯ ಕ್ಷೇತ್ರದಲ್ಲೂ ವಿಶ್ವಾರ್ಹತೆಯನ್ನು ಗಳಿಸುತ್ತಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯ ವಿಧಾನವು ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಿದೆ.
ರೊಬೊಟ್ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ವೈದ್ಯರಿಗೆ ನೀಡುವುದು, ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರೊಬೊಟಿಕ್ ಸಹಕಾರದಿಂದ ನೆರವೇರಿಸುವ ಕ್ಯಾನ್ಸರನ ಶಸ್ತ್ರಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಎಂದು ಕಂಡು ಬಂದಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯು ಲ್ಯಾಪರೊಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸೆ ಎರಡಕ್ಕೂ ಸೈ ಎನಿಸಿಕೊಂಡಿದೆ ಎಂದು ವಿವರಿಸಿದರು.
ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಮಹೇಶ ಕಲ್ಲೋಳ್ಳಿ ಮಾತನಾಡಿ, 3ಡಿ ತಂತ್ರಜ್ಞಾನ, ಹೈಡೆಫಿನೇಶನ್ ಕ್ಯಾಮರಾ ಹಾಗೂ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವುದರಿಂದ ಶಸ್ತ್ರಚಿಕಿತ್ಸೆಯ ಸ್ಥಳವನ್ನು ನಿಖರವಾಗಿ ತಲುಪಬಹುದು. ಇದರಿಂದ ಅತ್ಯಂತ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ನೆರವೇರಿಸಲು ಸಹಕರಿಸುತ್ತದೆ. ಅಲ್ಲದೇ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೊಬೊಟಿಕ್ ಶಸ್ತ್ರಚಿಕಿತ್ಸೆಗೆ ಸಣ್ಣ ರಂಧ್ರದ ಅಗತ್ಯವಿರುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಾಂಶಗಳಿಗೆ ಕಡಿಮೆ ತೊಂದರೆಯುಂಟಾಗುತ್ತದೆ. ಅಲ್ಲದೇ ರಕ್ತಸ್ರಾವ ಕಡಿಮೆಗೊಂಡು, ರೋಗಿಗಳು ಶೀಘ್ರವಾಗಿ ಗುಣಮುಖಗೊಳ್ಳುತ್ತಾರೆ ಎಂದು ಹೇಳಿದರು.
ಈಗಾಗಲೇ ರೊಬೊಟಿಕ್ ತಂತ್ರಜ್ಞಾನದಿಂದ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಅನ್ನನಾಳ ಕ್ಯಾನ್ಸರ್ನಿಂದ ಬಳಲುತ್ತಿದ್ದ 62 ಮತ್ತು 70 ವರ್ಷದ ರೋಗಿಗಳಿಗೆ ಸುಮಾರು 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಕುಮಾರ ವಿಂಚುರಕರ ಮಾತನಾಡಿ, ರೊಬೊಟಿಕ್ ತಂತ್ರಜ್ಞಾನವು ಶಸ್ತ್ರಚಿಕಿತ್ಸಕರಿಗೆ ಸಾಂಪ್ರದಾಯಿಕ ಲ್ಯಾಪರೊಸ್ಕೋಪಿಕ್ ಉಪಕರಣಕ್ಕಿಂತ ಹೆಚ್ಚು ಸಹಕಾರಿಯಾಗಿದೆ ಮತ್ತು ದೀರ್ಘಾವಧಿವರೆಗಿನ ಶಸ್ತ್ರಚಿಕಿತ್ಸೆಗಳನ್ನು ಅನಾಯಾಸವಾಗಿ ನೆರವೇರಿಸುವದರಿಂದ ಶಸ್ತ್ರಚಿಕಿತ್ಸಕರ ಮೇಲಿನ ದೈಹಿಕ ಒತ್ತಡವನ್ನು ಕಡಿಮೆ ಮಾಡಲಿದೆ.
ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಹೋಲಿಸಿದರೆ ರೋಬೋಟಿಕ್ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳಲ್ಲಿ ಸೋಂಕಿನ ಅಪಾಯ ಕಡಿಮೆಯಿದ್ದು, ಶೀಘ್ರ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ. ಅಲ್ಲದೇ ಲ್ಯಾಪರೊಸ್ಕೋಪಿಕ್ ಮತ್ತು ತೆರೆದ ಶಸ್ತ್ರಚಿಕಿತ್ಸಾ ವಿಧಾನಗಳಿಗಿಂತ ಹೆಚ್ಚಿನ ಸಂದರ್ಭಗಳಲ್ಲಿ ಇದನ್ನು ಆದ್ಯತೆಯನ್ನಾಗಿ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ.
ರೊಬೊಟಿಕ್ ಶಸ್ತ್ರಚಿಕಿತ್ಸೆಯು ರೋಗಿಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಿದರೂ ಕೂಡ ಮೂಲಸೌಕರ್ಯ, ಉಪಕರಣಗಳ ಆಮದು ವೆಚ್ಚದಿಂದಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನಿಧಾನಗತಿ ಇದೆ ಎಂದು ಹೇಳಿದರು.
ಇದನ್ನೂ ಓದಿ: ಏಮ್ಸ್ ರಿಷಿಕೇಶದಲ್ಲಿ ಲಿವರ್ ಕ್ಯಾನ್ಸರ್ ರೋಗಿಗೆ ಯಶಸ್ವಿ ರೊಬೊಟಿಕ್ ಸರ್ಜರಿ