ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಚವಿ ಗ್ರಾಮದ ಜನರಿಗೆ ಮಳೆಗಾಲ ಬಂತೆಂದರೆ ಆತಂಕ ಶುರು. ಇವರ ಆತಂಕಕ್ಕೆ ಕಾರಣ ಗ್ರಾಮದ ಸಮೀಪ ಇರುವ ಕೊಪ್ಪದ ಕೆರೆ. ಮಳೆಗಾಲದಲ್ಲಿ ಈ ಕೆರೆ ತುಂಬಿ ಕೋಡಿಬಿದ್ದರೆ, ಗ್ರಾಮದ ರಸ್ತೆಗಳು ನದಿಯಂತಾಗುತ್ತವೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುತ್ತದೆ. ಇದರಿಂದಾಗಿ ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ಪರಿಸ್ಥಿತಿಯಿಂದ ಬೇಸತ್ತ ಗ್ರಾಮಸ್ಥರು ಮನೆಗಳ ಮುಂದೆ ವಡ್ಡು ಕಟ್ಟಿಕೊಳ್ಳುತ್ತಾರೆ. ಮಳೆಗಾಲ ಮುಗಿಯುವವರೆಗೆ ಜನರು ಅದರಲ್ಲಿಯೇ ಜೀವನ ಮಾಡುತ್ತಾರೆ. ಕೆಲ ಮನೆಗಳಂತೂ ಕೆರೆಯ ನೀರು ಬಸಿದು ಧರೆಗುರುಳುತ್ತವೆ. ಕೆಲ ಮನೆಗಳು ತಂಪು ಹಿಡಿದು ಕುಸಿಯುತ್ತವೆ. ಈ ಸಮಸ್ಯೆ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಇದೆ. ಪ್ರತಿವರ್ಷ ಮಳೆಗಾಲ ಬಂದರೆ ಈ ಸಮಸ್ಯೆ ಇರುವುದೇ ಎನ್ನುತ್ತಾರೆ ಗ್ರಾಮಸ್ಥರು.
ಅತೀ ಮಳೆಯಾದಾಗ ಜಿಲ್ಲಾಡಳಿತ ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುತ್ತದೆ. ಅದರಲ್ಲಿ ವಾಸಿಸುವ ಗ್ರಾಮಸ್ಥರು ಮಳೆಗಾಲ ಮುಗಿದ ನಂತರ ತಮ್ಮ ತಮ್ಮ ಮನೆಗಳಿಗೆ ಮರಳುತ್ತಾರೆ. ಪ್ರತೀ ವರ್ಷ ಈ ರೀತಿಯಾದಾಗ ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ. ಆದರೆ ಯಾರು ಸಮಸ್ಯೆ ಬಗೆಹರಿಸಿಲ್ಲ. ಬದಲಿಗೆ ಆತಂಕದಲ್ಲಿ ಮಳೆಗಾಲ ಕಳೆಯುವ ಗ್ರಾಮಸ್ಥರಿಗೆ ಆಶ್ವಾಸನೆಯಷ್ಟೇ ನೀಡುತ್ತಾರೆ.
ಇನ್ನು ಗ್ರಾಮಕ್ಕೆ ನುಗ್ಗುವ ನೀರನ್ನು ಬೇರೆ ಕಳಿಸಲು ಕಳಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಸೇರಿದಂತೆ ನರೇಗಾ ಯೋಜನೆಯಲ್ಲಿ ಕಾಲುವೆಗಳನ್ನು ನಿರ್ಮಿಸಲಾಗಿದೆ. ಆದರೆ ಗ್ರಾಮಕ್ಕೆ ನುಗ್ಗುವ ಕೆರೆಯ ನೀರನ್ನು ಬೇರೆ ಕಡೆ ಕಳಿಸುವ ಬದಲು ಈ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿ ಹರಿದು ಹೋಗಿದೆ ಎಂದು ಆರೋಪಿಸುತ್ತಾರೆ ಗ್ರಾಮಸ್ಥರು. ಅಗಸ್ಟ್ 15 ರಿಂದ ಗ್ರಾಮದಲ್ಲಿ ಈ ರೀತಿ ಕೆರೆ ನೀರು ಕೋಡಿ ಬಿದ್ದು ಹರಿಯುತ್ತಿದೆ.
ಮಕ್ಕಳು ನೀರಲ್ಲೇ ನಡೆದುಕೊಂಡು ಹೋಗಬೇಕು. ವಾಹನ ಚಾಲಕರು ನೀರು ತುಂಬಿದ ರಸ್ತೆಯಲ್ಲೇ ವಾಹನ ಚಾಲನೆ ಮಾಡಿಕೊಂಡು ಹೋಗಬೇಕು. ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎನ್ನುವುದು ಗ್ರಾಮಸ್ಥರ ಅಳಲು.
ಕಚವಿ ಗ್ರಾಮ ಪಂಚಾಯತ್ ಇದ್ದು ಇಲ್ಲದಂತಾಗಿದೆ. ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಿಡಿಓ ಸೇರಿ ಗ್ರಾಮಕ್ಕೆ ಅನುಕೂಲವಾಗುವ ಕಾಮಗಾರಿ ಬಿಟ್ಟು, ತಮಗೆ ಅನುಕೂಲವಾಗುವ ಕಾಮಗಾರಿ ಮಾಡುತ್ತಿದ್ದಾರೆ. ಇವರು ಈ ನೀರಿನ ಸಮಸ್ಯೆ ಬಗ್ಗೆ ಒಂದಿಷ್ಟೂ ತಲೆಕೆಡಿಸಿಕೊಂಡಿಲ್ಲ. ಹೀಗಾದರೆ ಹೇಗೆ ಬದುಕುಬೇಕು? ರಾತ್ರಿ ವೇಳೆ ಏನಾದರೂ ಆದರೆ ಯಾರು ಸಹಾಯಕ್ಕೆ ಬರುತ್ತಾರೆ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.
ಆದರೆ ಗ್ರಾಮಸ್ಥರ ಆರೋಪಗಳ ಕುರಿತಂತೆ ಮಾತನಾಡಿರುವ ಪಿಡಿಓ ಪರಮೇಶ್, "ಹಲವು ಯೋಜನೆ ರೂಪಿಸಲಾಗಿದೆ. ಆದರೆ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಒಂದು ವೇಳೆ ನೀರಿನ ಹರಿವು ಹೆಚ್ಚಾದರೆ ಗಂಜಿ ಕೇಂದ್ರ ತೆರೆಯಲಾಗುವುದು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳೇ ಇರುವ ಲಂಬಾಣಿ ತಾಂಡಾ: ಕತ್ತಲಲ್ಲಿದ್ದ ಗ್ರಾಮ ಈಗ ಜಿಲ್ಲೆಗೆ ಮಾದರಿ - Government Employees Village