ಬೆಂಗಳೂರು: "ದೇಶದಲ್ಲಿ ಜನಸಂಖ್ಯೆ, ವಾಹನ ಸಂಖ್ಯೆ ಎರಡೂ ಹೆಚ್ಚುತ್ತಿದೆ. ಜೀವ ಉಳಿಸಲು ರಸ್ತೆ ಸುರಕ್ಷತೆ ತಂತ್ರಜ್ಞಾನ ಆಧುನಿಕ ಕಾಲದ ಅವಶ್ಯಕ ಸಂಗತಿ. ಅಂತಾರಾಷ್ಟ್ರೀಯ ರಸ್ತೆ ಸುರಕ್ಷತೆ ಮಾದರಿ ನಮ್ಮಲ್ಲೂ ಬರಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ನಗರದ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಭಾರತೀಯ ಆಟೋಮೊಬೈಲ್ ತಯಾರಕರ ಒಕ್ಕೂಟ 'ನಮ್ಮ ರಸ್ತೆಗಳು ನಮ್ಮ ಜವಾಬ್ದಾರಿ' ವಿಚಾರದ ಮೇಲೆ ಹಮ್ಮಿಕೊಂಡಿದ್ದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು "ಪ್ರತಿಯೊಬ್ಬ ನಾಗರಿಕನು ಸ್ವಂತ ವಾಹನ ಹೊಂದಬೇಕು ಎನ್ನುವ ಕನಸು ಹೊಂದಿರುತ್ತಾನೆ. ಶೇ. 30-35 ರಷ್ಟು ಜನ ಮಾತ್ರ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಈ ಕಾರಣಕ್ಕೆ ರಸ್ತೆ ಸುರಕ್ಷತೆ ಅಗತ್ಯ" ಎಂದು ಪ್ರತಿಪಾದಿಸಿದರು.
ವಾಹನ ಚಾಲಕರು ಒತ್ತಡದಲ್ಲಿದ್ದಾರೆ: "ವಾಹನ ಚಾಲಕರು ಹೆಚ್ಚು ಒತ್ತಡಕ್ಕೆ ಒಳಗಾದಂತೆ ಕಾಣುತ್ತಾರೆ. ಈ ವಿಚಾರದಲ್ಲೂ ನಾವು ಗಮನ ಹರಿಸಬೇಕಿದೆ. ಪ್ರಯಾಣ ಮಾಡುವಾಗ ನಮ್ಮ ಜೀವ ಅವರ ಕೈಯಲ್ಲಿರುತ್ತದೆ. ಈ ಬಗ್ಗೆ ತಜ್ಞರು ಆಲೋಚಿಸಬೇಕು. ಕರ್ನಾಟಕ ಜನಸಂಖ್ಯೆ ಏಳು ಕೋಟಿಯಿದ್ದು. ಒಟ್ಟು ಮೂರು ಕೋಟಿ ವಾಹನಗಳಿವೆ. ಬೆಂಗಳೂರಿನ ಜನಸಂಖ್ಯೆ 1.50 ಕೋಟಿ ಇದ್ದರೆ, ವಾಹನ ಸಂಖ್ಯೆ 1.04 ಕೋಟಿಯಿದೆ. ರಸ್ತೆ ಸುರಕ್ಷತೆ ವಿಚಾರದಲ್ಲಿ ರಾಷ್ಟ್ರ ಹಾಗೂ ಕರ್ನಾಟಕದ ಸಚಿವರು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉತ್ತಮ ನಿರ್ಧಾರಗಳ ಮೂಲಕ ಸಾರಿಗೆ ಅಭಿವೃದ್ಧಿಗೆ ಪೂರಕವಾಗಿ ನಿಂತಿದ್ದಾರೆ" ಎಂದು ಹೇಳಿದರು.
ಸಂಚಾರದಟ್ಟಣೆ ನಿಯಂತ್ರಣಕ್ಕೆ ಕ್ರಮ: "ದೆಹಲಿ ಹಾಗೂ ಇತರ ನಗರಗಳಂತೆ ಬೆಂಗಳೂರು ಯೋಜಿತ ನಗರವಲ್ಲ. ನಾವು ಈ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದೇವೆ. ಸಂಚಾರದಟ್ಟಣೆ ಇಲ್ಲಿನ ಪ್ರಮುಖ ಸಮಸ್ಯೆ ಈ ಕಾರಣಕ್ಕೆ ಪೆರಿಫೆರಲ್ ರಿಂಗ್ ರೋಡ್ ಹಾಗೂ ಸುರಂಗ ರಸ್ತೆ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಹೊಸ ಭೂಸ್ವಾಧೀನ ಕಾಯ್ದೆಯಂತೆ ಭೂಮಿಗಳನ್ನು ವಶಪಡಿಸಿಕೊಂಡು ರಸ್ತೆಗಳನ್ನು ಅಗಲ ಮಾಡುವುದು ಈ ಮೊದಲಿನಷ್ಟು ಸುಲಭವಲ್ಲ. ಇದು ಕೇವಲ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರವಲ್ಲ, ರಾಷ್ಟ್ರಮಟ್ಟದಲ್ಲೂ ಈ ಸಮಸ್ಯೆಯಿದೆ" ಎಂದರು.
ಸ್ವಂತಕ್ಕಾಗಿ ಕೆಲಸ ಮಾಡುತ್ತಿಲ್ಲ: "ಈ ಸಮ್ಮೇಳನದ ಮೂಲಕ ರಸ್ತೆ ಸುರಕ್ಷತೆ ವಿಚಾರದಲ್ಲಿ ಉತ್ತಮ ಸಲಹೆಗಳು ಸರ್ಕಾರಕ್ಕೆ ದೊರಕಲಿ. ನೀವು ಹಿಡಿದ ಸಲಹೆಗಳನ್ನು ಸರ್ಕಾರದ ಮುಂದಿಟ್ಟು ಚರ್ಚಿಸಲಾಗುವುದು. ರಸ್ತೆ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಸ್ವಂತಕ್ಕಾಗಿ ಕೆಲಸ ಮಾಡುತ್ತಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತಿವೆ. ಆಟೋಮೊಬೈಲ್ ಕ್ಷೇತ್ರ ಹಾಗೂ ರಸ್ತೆ ಸುರಕ್ಷತೆ ವಿಚಾರದಲ್ಲಿ ಪ್ರತಿದಿನವೂ ಹೊಸ ಹೊಸ ಅನ್ವೇಷಣೆಗಳು ಹೊರಬರುತ್ತಿವೆ" ಎಂದು ಅಭಿಪ್ರಾಯಪಟ್ಟರು.
"ಇವಿ ಚಾರ್ಜಿಂಗ್ ವಾಹನಗಳ ಬಗ್ಗೆ ಜನರು ಇತ್ತೀಚಿಗೆ ಒಲವು ತೋರಿಸುತ್ತಿದ್ದಾರೆ. ಈ ಹಿಂದೆ ಇಂಧನ ಸಚಿವನಾಗಿದ್ದಾಗ ಗ್ರೀನ್ ಎನರ್ಜಿಗೆ ಉತ್ತೇಜನ ನೀಡಿದ್ದೆ" ಎಂದು ಹೇಳಿದರು. "ಆರೋಗ್ಯ, ಶಿಕ್ಷಣ ಹಾಗೂ ಆಟೋಮೊಬೈಲ್ ಕ್ಷೇತ್ರಗಳಲ್ಲಿ ಬೆಂಗಳೂರು ಹೆಸರು ಮಾಡಿದೆ. ಅನೇಕ ಸ್ಟಾರ್ಟ್ ಅಪ್ ಗಳು ಸಹ ಗ್ಲೋಬಲ್ ಮಟ್ಟದಲ್ಲಿ ಹೆಸರು ಮಾಡಿವೆ. ಭಾರತವನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತಿದೆ" ಎಂದರು.
ಇದನ್ನೂ ಓದಿ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಲೆಕ್ಟ್ರಿಕ್ ವಾಹನಗಳ ಮಾರಾಟ - Electric Vehicle Sales