ದಾವಣಗೆರೆ: ಭಾರಿ ಮಳೆಯಿಂದ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ಸೇತುವೆ ನೀರಿನಿಂದ ಆವೃತಗೊಂಡು, ಕಾಣದಂತಾಗಿದೆ. ಇದರಿಂದಾಗಿ ಜನ 15 ಕಿ.ಮೀ. ಕ್ರಮಿಸಿ ತಮ್ಮ ಗ್ರಾಮ ಸೇರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೇ ರಸ್ತೆ ಶಿವಮೊಗ್ಗ, ದಾವಣಗೆರೆ, ಹರಿಹರ, ಮಲೇಬೆನ್ನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿರುವುದರಿಂದ, ಎತ್ತರ ಹೆಚ್ಚಿಸಿ ನೂತನ ಸೇತುವೆ ನಿರ್ಮಾಣ ಮಾಡುವಂತೆ ಈ ಭಾಗದ ಜನರು ಆಗ್ರಹಿಸಿದ್ದಾರೆ.
ದಶಕಗಳ ಹಳೇಯ ಸೇತುವೆ ಆಗಿದ್ದು, ಪ್ರತೀ ವರ್ಷ ಇದೇ ಸಮಸ್ಯೆ ಎದುರಾಗುತ್ತಿದೆ. ಗ್ರಾಮಸ್ಥರು ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನ ಆಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ - ಪತ್ತೆಪುರ ರಸ್ತೆಯನ್ನು ತುಂಗಭದ್ರಾ ನದಿ ನೀರು ಆವರಿಸಿಕೊಂಡಿದೆ. ಇದರಿಂದ ಉಕ್ಕಡಗಾತ್ರಿಗೆ ಆಗಮಿಸುವ ಸಾವಿರಾರು ಭಕ್ತರಿಗೆ ತೊಂದರೆ ಆಗುತ್ತಿದೆ. ಅಲ್ಲದೇ, ಉಕ್ಕಡಗಾತ್ರಿಯಿಂದ ಪತ್ತೆಪುರ, ನಂದಿಗುಡಿ, ಶಿವಮೊಗ್ಗ, ಹರಿಹರ, ರಾಣೆಬೆನ್ನೂರು, ಮಲೇಬೆನ್ನೂರು, ದಾವಣಗೆರೆಗೆ ಸಂಚರಿಸುವ ಜನರಿಗೂ ತೊಂದರೆಯಾಗುತ್ತಿದೆ. ಸೇತುವೆ ತೀವ್ರ ಕೆಳಗಿದ್ದು, ಉಕ್ಕಡಗಾತ್ರಿ ತಟದಲ್ಲಿ ಹರಿಯುವ ತುಂಗಭದ್ರಾ ನದಿಯ ನೀರು ರಸ್ತೆಗೆ ಬಂದರೆ ಇಡೀ ಸೇತುವೆ ನೀರಿನಿಂದ ಜಲಾವೃತವಾಗುತ್ತದೆ.
ಈ ಊರುಗಳಿಗೆ ತೆರಳುವವರು ಸುತ್ತುಹಾಕಿಕೊಂಡು ತುಮ್ಮಿನಕಟ್ಟೆಗೆ ತೆರಳಿ 15 ಕಿ.ಮೀ ಕ್ರಮಿಸಿ ಹೋಗಬೇಕು. ಒಂದು ವೇಳೆ, ಆಂಬ್ಯುಲೆನ್ಸ್ನಲ್ಲಿ ತುರ್ತಾಗಿ ತೆರಳಬೇಕಾದರೆ ಸಮಸ್ಯೆ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಉಕ್ಕಡಗಾತ್ರಿ ಗ್ರಾಮಸ್ಥರು. ಬಹಳ ಹಳೇಯ ಸೇತುವೆ ಆಗಿರುವುರಿಂದ ಗ್ರಾಮಸ್ಥರು ಅದನ್ನು ತೆರುವು ಮಾಡಿ ಎತ್ತರ ಪ್ರದೇಶದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಪರಿಪರಿಯಾಗಿ ರಾಜಕಾರಣಿಗಳಿಗೆ ಕೇಳಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ್ದಾರೆ.
ವಾಹನ ಸವಾರರ ಅಳಲು: "ಮಳೆ ಹೆಚ್ಚಾದರೆ ಪತ್ತೆಪುರದಿಂದ ಹರಿಹರಕ್ಕೆ ಹೋಗುವ ಸೇತುವೆ ಜಲಾವೃತವಾಗಿದೆ. ನಾವು ತುಮ್ಮಿನಕಟ್ಟೆ ಮೂಲಕ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೃಷಿ ಚಟುವಟಿಕೆಗೂ ರೈತರಿಗೆ ಸಮಸ್ಯೆ ಆಗುತ್ತಿದೆ" ಎಂದು ವಾಹನ ಸವಾರ ಸತೀಶ್ ತಿಳಿಸಿದರು.
ಗ್ರಾಮಸ್ಥರು ಹೇಳುವುದೇನು?: "ಹರಿಹರ, ಪತ್ತೇಪುರ, ದಾವಣಗೆರೆಗೆ ತೆರಳುವ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುತ್ತದೆ. ಪ್ರತೀವರ್ಷ ಹೊಳೆ ತುಂಬಿದರೆ ಇದೇ ಸಮಸ್ಯೆ ಎದುರಾಗುತ್ತದೆ. ಈ ಸೇತುವೆಯನ್ನು ಎತ್ತರಕ್ಕೆ ನಿರ್ಮಾಣ ಮಾಡಿದರೆ ಸೇತುವೆ ಜಲಾವೃತ ಆಗುವುದನ್ನು ತಪ್ಪಿಸಬಹುದಾಗಿದೆ" ಎಂದು ಉಕ್ಕಡಗಾತ್ರಿ ಗ್ರಾಮಸ್ಥ ಅಶೋಕ್ ಶಿವಣ್ಣ ತಿಳಿಸಿದರು.
ಇದನ್ನೂ ಓದಿ: ಕಳಸದ ಹೆಬ್ಬಾಳೆ ಸೇತುವೆ ಮುಳುಗಡೆ: ಪ್ರವಾಸಿಗರಿಗೆ ನಿಷೇಧ, ಹೊರನಾಡು ಸಂಪರ್ಕ ಕಡಿತ - Heavy Rain in chikkamagaluru