ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಇರುವ ಜಾಗವೇ ನಾಪತ್ತೆಯಾಗುತ್ತಿದ್ದು, ಜನರು ಭಯಭೀತರಾಗಿದ್ದಾರೆ.
ಕಳಸದ ತನೂಡಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಡಾಂಬರು ರಸ್ತೆ ಮಾಯವಾಗಿದೆ. ರಸ್ತೆಗೆ ನಿರ್ಮಿಸಲಾಗಿದ್ದ ಸೇತುವೆಯೂ ಕಣ್ಮರೆಯಾಗಿದೆ.
ಶಂಕರ ಕೊಡಿಗೆ, ಗಣಪತಿ ಕಟ್ಟೆ, ಬಸರಿ ಕಟ್ಟೆ ಮಾರ್ಗದ ರಸ್ತೆ ಇದಾಗಿದ್ದು, ರಸ್ತೆಯಲ್ಲಿ ಓಡಾಡಲು ವಿದ್ಯಾರ್ಥಿಗಳು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಮಳೆಯಿಂದ ಕಿತ್ತುಹೋದ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದ್ದು, ಸೇತುವೆ ದುರಸ್ತಿಗಾಗಿ ಆಗ್ರಹಿಸಿದ್ದಾರೆ.
ಸಂಸೆ ಗ್ರಾ.ಪಂ.ವ್ಯಾಪ್ತಿಯ ಕುನ್ನಿ ಹಳ್ಳ ಗ್ರಾಮದಲ್ಲಿ ಮನೆ ಮೇಲೆ ಗುಡ್ಡವೇ ಜಾರಿದೆ. ಮನೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ನೀರು ಬಂದಿದ್ದು, ಕುಟುಂಬಸ್ಥರು ಎಚ್ಚರಗೊಂಡಿದ್ದಾರೆ. ಗುಡ್ಡ ಕುಸಿತದ ಶಬ್ದಕ್ಕೆ ಮನೆಯಿಂದ ಓಡಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಹಲವೆಡೆ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಅಧಿಕಾರಿಗಳಿಗೆ ವಿಷಯ ಮುಟ್ಟಿಸಲು ಸಂಪರ್ಕವಿಲ್ಲದೆ ಸಂಕಷ್ಟ ಎದುರಾಗಿದ್ದು, ಸಹಾಯಕ್ಕಾಗಿ ಕುಟುಂಬಸ್ಥರು ಅಂಗಲಾಚುತ್ತಿದ್ದಾರೆ. ಮನೆ ಸುತ್ತಮುತ್ತಲೂ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿದ್ದು, ತಮ್ಮನ್ನು ಬೇರೆಡೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ.
ಕೊಪ್ಪ ತಾಲೂಕಿನ ಬಸರಿ ಕಟ್ಟೆ ಚೆನ್ನಕಲ್ಲು ಗ್ರಾಮದ ನಾಗರಾಜ್ ಎಂಬವರ ಮನೆ ಮುಂದೆ ದೊಡ್ಡ ಪ್ರಮಾಣದ ಭೂಕುಸಿತವಾಗಿದೆ. 300 ಅಡಿಯಷ್ಟು ದೂರ ಭೂಮಿ ಜಾರಿ ಹೋಗಿದ್ದು, ರಭಸಕ್ಕೆ ಮನೆ ಅಡಿಪಾಯ, ಗೋಡೆಗಳಲ್ಲಿ ಬಿರುಕುಂಟಾಗಿದೆ.
ಬಸರಿಕಟ್ಟೆಯಲ್ಲೂ 3 ಮನೆಗಳು ಬೀಳುವ ಹಂತ ತಲುಪಿವೆ. ಈ ರೀತಿಯ ಘಟನೆಗಳು ನಡೆಯುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು.