ಬೆಂಗಳೂರು: ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ಬಂಧಿತರಾಗಿ ಎಸ್ಐಟಿ ವಶದಲ್ಲಿರುವ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಅವರನ್ನು ಇಂದು ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದೆ.
ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗುವ ಹಿನ್ನೆಲೆ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಹೊಟ್ಟೆನೋವು ಹಾಗೂ ಗಾಸ್ಟ್ರಿಕ್ ಹಿನ್ನೆಲೆ ನಿನ್ನೆ ಬೌರಿಂಗ್ ಆಸ್ಪತ್ರೆಗೆ ರೇವಣ್ಣ ಅವರನ್ನ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ಶಿಫಾರಸು ಮಾಡಿದ್ದರಿಂದ ಅಧಿಕಾರಿಗಳು ಕರೆದೊಯ್ದಿದ್ದರು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾಗುವ ಹಿನ್ನೆಲೆ ಅವರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮರಳಿ ಎಸ್ಐಟಿ ಕಚೇರಿಗೆ ಕರೆತಂದರು.
ಮತ್ತೊಂದೆಡೆ ಜಾಮೀನು ಕೋರಿ ರೇವಣ್ಣ ಪರ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 2.45ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೂಡಿದೆ. ಇಂದು ಬೆಳಗ್ಗೆ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್ಐಟಿ ಪರ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಒಂದು ಗಂಟೆ ಸಮಯಾವಕಾಶ ಕೇಳಿದ್ದರಿಂದ ಇದನ್ನು ಪುರಸ್ಕರಿಸಿ ಮಧ್ಯಾಹ್ನಕ್ಕೆ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.
ಓದಿ: ದೇವರಾಣೆಗೂ ನಾನು ಯಾವ ಸಂತ್ರಸ್ತೆಯನ್ನೂ ಭೇಟಿ ಮಾಡಿಲ್ಲ: ಶ್ರೇಯಸ್ ಪಟೇಲ್ - Shreyas Patel