ದಾವಣಗೆರೆ: ''ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಲೀಡ್ ಕೊಡಿಸದೇ ಇರುವ ಸಚಿವರ ರಾಜೀನಾಮೆಯನ್ನು ಪಡೆಯಬೇಕು ಎಂದು ಶಾಸಕ ಶಿವಗಂಗಾ ಬಸವರಾಜ್ ಅವರು ಪಕ್ಷದ ನಾಯಕರಾದ ಸಂಸದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ದಾವಣಗೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿ, ''ಲೋಕಸಭಾ ಚುನಾವಣೆಯಲ್ಲಿ ಯಾವ ಸಚಿವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲೀಡ್ ಕಡಿಮೆ ಕೊಡಿಸಿದ್ದಾರೋ ಅಂತವರನ್ನು ಸಚಿವರನ್ನು ಸ್ಥಾನದಿಂದ ವಜಾಗೊಳಿಸಿ, ಹೊಸಬರಿಗೆ ಅವಕಾಶ ಮಾಡಿಕೊಡಿ'' ಎಂದು ಸ್ವಪಕ್ಷದ ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
''ರಾಹುಲ್ ಗಾಂಧಿಯವರು ಹಾಗೂ ಹಿರಿಯ ನಾಯಕರು ಇಂತಹ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗೆ ಪಕ್ಷ ಮುಖ್ಯವೇ ಹೊರತು, ವ್ಯಕ್ತಿ ಮುಖ್ಯವಲ್ಲ. ಆದ್ದರಿಂದ ಕ್ರಮ ಕೈಗೊಳ್ಳಬೇಕು, ಇಷ್ಟೊಂದು ಗ್ಯಾರಂಟಿ ನೀಡಿದರೂ ಕೂಡ ಹೆಚ್ಚು ಸೀಟ್ ಬಂದಿಲ್ಲ, ಯಾರು ಲೀಡ್ ಕೊಡಿಸಲು ಸಾಧ್ಯವಾಗಲಿಲ್ಲವೋ ಅಂತ ಸಚಿವರನ್ನು ತೆಗೆದುಹಾಕಿ, ಹೊಸಬರಿಗೆ ಅವಕಾಶ ಕೊಡಬೇಕು. ಹಲವು ಶಾಸಕರು, ಕಾರ್ಯಕರ್ತರು ಹಗಲು ಇರುಳು ಕೆಲಸ ಮಾಡಿ ಆಯಾ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿದ್ದಾರೆ. ಆದರೆ, ಸಚಿವರು ಅವರ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿಲ್ಲ. ಕೆಲವು ಕಡೆಗಳಲ್ಲಿ ನಮ್ಮ ಸಚಿವರು ಲೀಡ್ ಕೊಡಿಸದೇ ಇದ್ದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ'' ಎಂದು ಪ್ರಶ್ನೆಯೊಂದಕ್ಕೆ ಶಾಸಕ ಶಿವಗಂಗಾ ಬಸವರಾಜ್ ಉತ್ತರಿಸಿದರು.