ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಾಲೂರು ಗ್ರಾಮದ ಬಳಿ ಭದ್ರಾ ನದಿ ಎರಡು ಭಾಗವಾಗಿ ಹರಿಯುತ್ತಿದ್ದು, ದ್ವೀಪದಂತಿರುವ ಜಾಗದಲ್ಲಿ ಮೇಯಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಬೋಟ್ ಮೂಲಕ ತೆರಳಿ ಅವುಗಳನ್ನು ರಕ್ಷಣೆ ಮಾಡಲಾಗಿದೆ.
ಎಂದಿನಂತೆ ದನಗಳು ಮೇಯಲು ಹೋಗಿದ್ದವು. ಈ ವೇಳೆ, ಪಶ್ಚಿಮಘಟ್ಟ ಸಾಲಿನಲ್ಲಿ ಮಳೆ ಸುರಿದ ಪರಿಣಾಮ ನದಿಯ ಹರಿವಿನಲ್ಲಿ ಏಕಾಏಕಿ ಏರಿಕೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಭದ್ರಾ ಹುಲಿ ಸಂರಕ್ಷತಾರಣ್ಯದ ಸಿಬ್ಬಂದಿ, ಸ್ಥಳೀಯರ ಸಹಾಯದ ಮೂಲಕ ಬೋಟ್ನಲ್ಲಿ ತೆರಳಿ ಜಾನುವಾರುಗಳನ್ನು ರಕ್ಷಿಸಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಭಾರೀ ಗಾಳಿಗೆ ಮನೆಯ ಗೋಡೆಯೊಂದು ಕುಸಿದು ಬಿದ್ದಿರುವ ಘಟನೆ ಚಿಕ್ಕಮಗಳೂರು ನಗರದ ಹೊರ ವಲಯದ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ. ನಾಗೇಶ್ ಶೆಟ್ಟಿ ಎಂಬುವರ ಮನೆ ಇದಾಗಿದೆ. ಮನೆಯ ಗೋಡೆ ಹೊರ ಭಾಗಕ್ಕೆ ಬಿದ್ದಿದ್ದರಿಂದ ಅನಾಹುತ ತಪ್ಪಿದೆ. ಒಳ ಭಾಗಕ್ಕೆ ಬಿದ್ದಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು.
ಅದೃಷ್ಟವಶಾತ್ ಮನೆಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮನೆಯ ಮುಂದೆ ನಿಲ್ಲಿಸಿದ್ದ ಜಗದೀಶ್ ಎಂಬುವರ ಆಟೋ ಮೇಲೆ ಗೋಡೆ ಬಿದ್ದಿದ್ದು, ಆಟೋ ಭಾಗಶಃ ಜಖಂ ಆಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಕೊನೆಗೂ ಸಿಕ್ತು!: ಗಂಗಾವಳಿ ನದಿ ದಡದಲ್ಲಿ ಲಾರಿ ಅವಶೇಷ ಪತ್ತೆ; ಶಾಸಕ ಸತೀಶ್ ಸೈಲ್ ಮಾಹಿತಿ - A lorry wreckage was found