ಬೆಳಗಾವಿ: ಖಾನಾಪೂರ ತಾಲೂಕಿನ ಚಿಕಲೆ ಫಾಲ್ಸ್ನಲ್ಲಿ ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ನಡೆದಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವಿನಾಯಕ ಬುತ್ತುಲ್ಕರ್ ಪ್ರಪಾತಕ್ಕೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ವ್ಯಕ್ತಿ. ವಿನಾಯಕ ತನ್ನ ಸ್ನೇಹಿತರ ಜತೆಗೆ ಚಿಕಲೆ ಫಾಲ್ಸ್ಗೆ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿತ್ತು.
ಆಯತಪ್ಪಿ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದ ತಕ್ಷಣವೇ ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಖಾನಾಪುರ ಪೊಲೀಸರು ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಪ್ರಪಾತಕ್ಕೆ ಬಿದ್ದು ಸಾವು ಬದುಕಿನ ಮಧ್ಯ ಒದ್ದಾಡುತ್ತಿದ್ದ ವಿನಾಯಕನನ್ನು ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ.
100 ಅಡಿ ಆಳದಲ್ಲಿ ಬಿದ್ದರೂ ವಿನಾಯಕ ಮುಖ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾನಾಪುರ ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಗೆಳೆಯನನ್ನು ರಕ್ಷಿಸಿದ್ದಕ್ಕೆ ಯುವಕರು ಚಪ್ಪಾಳೆ ತಟ್ಟಿ ಧನ್ಯವಾದ ಸಲ್ಲಿಸಿದರು. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬಾಲಕಿಯ ಪ್ರಾಣ ಕಾಪಾಡಿದ ಟ್ರ್ಯಾಕ್ಟರ್ ಚಾಲಕ: ವಿಡಿಯೋ