ಗಂಗಾವತಿ (ಕೊಪ್ಪಳ): ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಯ ರೂವಾರಿ ನಿವೃತ್ತ ಎಂಜೀನಿಯರ್ ಕನ್ಹಯ್ಯ ನಾಯ್ಡು ಅವರಿಗೆ ಆಂಧ್ರ ಸರ್ಕಾರ ಸನ್ಮಾನಿಸಿದೆ.
ಆಂಧ್ರಪ್ರದೇಶದ ವಿಧಾನಸೌಧ ಸಚಿವಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ನಿವೃತ್ತ ಎಂಜಿನಿಯರ್ ಜಲಾಶಯಗಳ ತಜ್ಞ ಕನ್ಹಯ್ಯ ನಾಯ್ಡು ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ನಾಯ್ಡು, ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್-19 ದುರಸ್ತಿಗೀಡಾಗಿ ಜಲಾಶಯಕ್ಕೆ ಅಪಾಯದ ಆತಂಕ ಎದುರಾಗಿತ್ತು. ಇಡೀ ಜಲಾಶಯದ ನೀರು ಖಾಲಿ ಮಾಡಬೇಕು ಎಂಬ ಭೀತಿಯಾಗಿತ್ತು. ನೀವು ಸ್ಥಳಕ್ಕೆ ತೆರಳಿ ಸಮಯೋಚಿತ ನಿರ್ಧಾರ ಕೈಗೊಂಡು ನೀರು, ಜಲಾಶಯ ಉಳಿಸಿದ್ದೀರಿ ಎಂದು ಪ್ರಶಂಸಿಸಿದರು.
'ಕರ್ನಾಟಕ ಸರ್ಕಾರದ ತುರ್ತು ಮನವಿ ಹಿನ್ನೆಲೆ ತಕ್ಷಣವೇ ಡ್ಯಾಂಗೆ ಭೇಟಿ ನೀಡಿ ಐದು ದಿನಗಳ ಕಾಲ ಸ್ಥಳದಲ್ಲಿ ಬೀಡು ಬಿಟ್ಟು, ಎಲಿಮೆಂಟ್ ಅಳವಡಿಸುವ ಮೂಲಕ ಕರ್ನಾಟಕದ ರೈತರನ್ನಷ್ಟೆ ಅಲ್ಲ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಅನ್ನದಾತರ ಬೆನ್ನಿಗೆ ನಿಂತಿದ್ದೀರಿ' ಎಂದು ಸಿಎಂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕನ್ಹಯ್ಯ ನಾಯ್ಡು, ಅಪಾಯದಲ್ಲಿದ್ದ ರೈತರ ನೆರವಿಗೆ ತುರ್ತು ಧಾವಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಅದನ್ನು ನಾನೂ ಮಾಡಿದ್ದೇನೆ. ಜಲಾಶಯದ ಬಾಳಿಕೆ ಅವಧಿಯ ಬಗ್ಗೆ ತಜ್ಞರಿಂದ ಪರಿಶೀಲನೆ ಮಾಡಿಸಬೇಕಿದೆ ಎಂದು ಸಿಎಂ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅಲ್ಲದೇ ದುರಸ್ತಿ ಸಂದರ್ಭದ ಐದು ದಿನಗಳ ಕಾಲ ತಮ್ಮ ನೇತೃತ್ವದಲ್ಲಿನ ತಂಡ ಎದುರಿಸಿದ ಪ್ರತಿ ಸನ್ನಿವೇಶ, ಆತಂಕದ ಕ್ಷಣ, ರೈತರ ಹಿತಾಸಕ್ತಿ, ಕರ್ನಾಟಕ ಮತ್ತು ಆಂಧ್ರಪ್ರದೇಶದ ರಾಜ್ಯದ ಚುನಾಯಿತ ಪ್ರತಿನಿಧಿಗಳ ಕಾಳಜಿಯ ಬಗ್ಗೆ ನಾಯ್ಡು ಅವರು ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಓದಿ: ಹೆಸರು ರಾಶಿ ಜೋರು, ದರ ನೋಡಿದ್ರೆ ಚೂರು: ಖರೀದಿ ಕೇಂದ್ರ ತೆರೆಯದ ವಿರುದ್ಧ ಅನ್ನದಾತನ ಆಕ್ರೋಶ - Green Gram
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತಿತ್ತು. ಇದರಿಂದ ಜಲಾಶಯ ಅವಲಂಬಿಸಿದ್ದ ಜನರು ಆತಂಕಕ್ಕೀಡಾಗಿದ್ದರು. ಬಳಿಕ ಕನ್ಹಯ್ಯ ನಾಯ್ಡು ಅವರ ತಂಡ ಎಲಿಮೆಂಟ್ ಕೂರಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದ ಜಲಾಶಯದಿಂದ ಪೋಲಾಗಿ ಹರಿಯುತ್ತಿದ್ದ ನೀರನ್ನು ಉಳಿಸಲಾಗಿದ್ದು, ಅಂದಾಜು 90 ಟಿಎಂಸಿ ನೀರು ಉಳಿಯಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂಗೆ ಮೂರು ಎಲಿಮೆಂಟ್ ಅಳವಡಿಕೆ ಯಶಸ್ವಿ: ಪೋಲಾಗುತ್ತಿದ್ದ ನೀರಿಗೆ ತಡೆ - Tungabhadra Dam