ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬವರ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್‌ರಾವ್‌ನನ್ನು ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಕೈಗೆತ್ತಿಕೊಂಡರು.
ಪ್ರದೂಷ್ ಪರ ವಕೀಲರು, ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಆರೋಪದ ಹಿನ್ನೆಲೆಯಲ್ಲಿ ಪ್ರದೂಷ್ನನ್ನು ಬೆಳಗಾವಿಯ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಇಡೀ ಪ್ರಕರಣದಲ್ಲಿ ಪ್ರದೂಷ್ ಪಾತ್ರವಿಲ್ಲ. ಹೀಗಾಗಿ, ಅವರನ್ನು ಪರಪ್ಪನ ಅಗ್ರಹಾರದಲ್ಲೇ ಇಡಲು ಅವಕಾಶ ಮಾಡಿ ಕೊಡಬೇಕು ಎಂದು ಕೋರಿದರು.
ಇದಕ್ಕೆ ಪೀಠ, "ದರ್ಶನ್ ಸ್ಥಳಾಂತರ (ಬಳ್ಳಾರಿ) ಮಾಡಿರುವುದನ್ನೂ ಪ್ರಶ್ನೆ ಮಾಡಲಾಗಿದೆಯೇ?" ಎಂದರು. ಇದಕ್ಕೆ ವಕೀಲರು, "ಪ್ರದೋಶ್ ಸ್ಥಳಾಂತರವನ್ನು ಮಾತ್ರ ಪ್ರಶ್ನೆ ಮಾಡಲಾಗಿದೆ" ಎಂದರು. ಆಗ ಪೀಠವು, "ನೀವು ಇಲ್ಲೇ (ಪರಪ್ಪನ ಅಗ್ರಹಾರ) ಇರಬೇಕಾ" ಎಂದು ಪ್ರಶ್ನಿಸಿದರು.
ಅದಕ್ಕೆ ವಕೀಲರು, "ಪ್ರದೂಷ್ ಇಲ್ಲೇ ಏಕೆ ಇರಬೇಕು ಎಂದು ನ್ಯಾಯಾಲಯಕ್ಕೆ ಸಮರ್ಥನೆ ನೀಡಲು ನಮ್ಮ ಬಳಿ ಸಾಕಷ್ಟು ವಿಚಾರಗಳಿವೆ. ನಮ್ಮನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ" ತಿಳಿಸಿದರು.
ಇದಕ್ಕೆ ಪೀಠ, "ದರ್ಶನ್ ಸಹ ವಾಪಸ್ ಬರಬೇಕಾ?" ಎಂದು ಕೇಳಿತು. ವಕೀಲರು, "ಇಲ್ಲ. ಇಡೀ ಪ್ರಕರಣದಲ್ಲಿ ಪ್ರದೂಶ್ ಪಾತ್ರ ಇಲ್ಲ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಿರುವುದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಇದರಲ್ಲಿ ಪ್ರದೂಷ್ ಪಾತ್ರ ಇಲ್ಲ" ಎಂದು ತಿಳಿಸಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿತು.