ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ರವಿಶಂಕರ್, ಧನರಾಜ್, ವಿನಯ್, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೂಶ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ನಾಯ್ಕ್ ಎಂಬ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದರು. ಈವರೆಗೆ ಪೊಲೀಸರು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಗಳ ಅನುಸಾರ ಇಡೀ ಪ್ರಕರಣ ಸಾಗಿ ಬಂದಿರುವ ಹಿನ್ನೋಟ ಇಲ್ಲಿದೆ.
- ಜೂನ್ 9 - ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪದ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ.
- ಜೂನ್ 10 - ಆರೋಪಿಗಳಾದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ್ ಕೇಶವಮೂರ್ತಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರಿಗೆ ಶರಣಾದರು. ಫೈನಾನ್ಸ್ ಹಣದ ವಿಚಾರವಾಗಿ ರೇಣುಕಾಸ್ವಾಮಿ ಎಂಬಾತನ ಹತ್ಯೆ ಮಾಡಿದ್ದಾಗಿ ತಿಳಿಸಿದ್ದರು. ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳ ಹೆಸರು ಬಹಿರಂಗ.
- ಜೂನ್ 11 - ಆರ್.ಆರ್.ನಗರದ ಆರ್ಚ್ ಬಳಿ ವಿನಯ್, ದೀಪಕ್ ಹಾಗೂ ಬಿಡದಿ ಟೋಲ್ ಬಳಿ ಪವನ್, ನಂದೀಶ್, ಲಕ್ಷ್ಮಣ, ಪ್ರದೂಶ್ ಪೊಲೀಸರ ವಶಕ್ಕೆ. ಅದೇ ದಿನ ಮೈಸೂರಿನ ಖಾಸಗಿ ಹೋಟೆಲ್ನಲ್ಲಿದ್ದ ನಟ ದರ್ಶನ್, ಆರ್.ಆರ್.ನಗರದ ನಿವಾಸದಲ್ಲಿದ್ದ ಪವಿತ್ರಾ ಗೌಡ ಸೆರೆ. ಮೃತದೇಹದ ಗುರುತು ಹಿಡಿದ ರೇಣುಕಾಸ್ವಾಮಿ ಪೋಷಕರು. ಪೊಲೀಸರ ವಿಚಾರಣೆ ವೇಳೆ, 'ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸುತ್ತಿದ್ದ ಅಶ್ಲೀಲ ಸಂದೇಶಗಳೇ ಹತ್ಯೆಗೆ ಕಾರಣ' ಎಂಬ ಸಂಗತಿ ಬಹಿರಂಗ. ನಂತರ, ಆರೋಪಿಗಳ ಅಧಿಕೃತ ಬಂಧನ. 13 ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ನಗರದ 24ನೇ ಎಸಿಎಂಎಂ ನ್ಯಾಯಾಲದಿಂದ ಆದೇಶ.
- ಜೂನ್ 12 - ಕೃತ್ಯಕ್ಕೆ ಬಳಸಿದ್ದ ಕಾರುಗಳು ಜಪ್ತಿ. ಹತ್ಯೆ ನಡೆದ ಪಟ್ಟಣಗೆರೆ ಶೆಡ್ನಲ್ಲಿ ಮಹಜರು ಪ್ರಕ್ರಿಯೆ.
- ಜೂನ್ 13 - ರೇಣುಕಾಸ್ವಾಮಿಯನ್ನು ಕರೆತಂದಿದ್ದ ರಸ್ತೆಯ ಸಿಸಿಟಿವಿ ದೃಶ್ಯಗಳು, ಟೋಲ್ ರಶೀದಿ ಸಂಗ್ರಹಣೆ. ರೇಣುಕಾಸ್ವಾಮಿ ಸಾವಿಗೆ ವಿದ್ಯುತ್ ಶಾಕ್ ಹಾಗೂ ಆಂತರಿಕ ರಕ್ತಸ್ರಾವ ಕಾರಣವೆಂಬುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ.
- ಜೂನ್ 14 - ಜಪ್ತಿಯಾದ ಕಾರಿನಲ್ಲಿ ಸಿಕ್ಕ ಕೂದಲಿನ ಮಾದರಿ, ರಕ್ತದ ಕಲೆಗಳ ಮಾದರಿ ಎಫ್ಎಸ್ಎಲ್ಗೆ ರವಾನೆ. ಆರೋಪಿ ಪ್ರದೂಶ್ ಮನೆಯಲ್ಲಿ ಮಹಜರು. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದ ವಾಹನದ ಚಾಲಕ ರವಿಶಂಕರ್ ಚಿತ್ರದುರ್ಗದ ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣು.
- ಜೂನ್ 15 - ಪಟ್ಟಣಗೆರೆ ಶೆಡ್ನಲ್ಲಿ ಮಹಜರು. ಸಿಆರ್ಪಿಸಿ 164ನಡಿ ಶೆಡ್ ಸೆಕ್ಯುರಿಟಿಯ ಹೇಳಿಕೆ ದಾಖಲು. ಆರೋಪಿಗಳು ರೇಣುಕಾಸ್ವಾಮಿಯ ಮೊಬೈಲ್ ಎಸೆದಿದ್ದ ಸುಮನಹಳ್ಳಿಯ ರಾಜ ಕಾಲುವೆಯಲ್ಲಿ ಶೋಧ. ದರ್ಶನ್ ಮನೆಯಲ್ಲಿ ಮಹಜರು. ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳ ಜಪ್ತಿ. ಅದೇ ದಿನ ಬನಶಂಕರಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಶೂಗಳು ಜಪ್ತಿ.
- ಜೂನ್ 16 - ಆರೋಪಿಗಳಾದ ನಿಖಿಲ್ ನಾಯ್ಕ್ ಹಾಗೂ ಕಾರ್ತಿಕ್ ನ್ಯಾಯಾಂಗ ಬಂಧನಕ್ಕೆ.
- ಜೂನ್ 17 - ರೇಣುಕಾಸ್ವಾಮಿಯ ಮೊಬೈಲ್ ಪತ್ತೆಗಾಗಿ ಮುಂದುವರೆದ ಶೋಧ. ಅಗ್ನಿಶಾಮಕದಳದ ನೆರವು ಕೋರಿದ ಪೊಲೀಸರು.
- ಜೂನ್ 20 - ದರ್ಶನ್ ಹಾಗೂ ಸಹಚರರಾದ ಧನರಾಜ್, ಪ್ರದೂಶ್, ವಿನಯ್ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ. ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಪವನ್, ನಂದೀಶ್, ರವಿ, ಅನುಕುಮಾರ್ಗೆ ನ್ಯಾಯಾಂಗ ಬಂಧನ.
- ಜೂನ್ 21 - ದರ್ಶನ್ ಹಾಗೂ ಸಹಚರರಾದ ಧನರಾಜ್, ಪ್ರದೂಶ್, ವಿನಯ್ ವಿಚಾರಣೆ. ಆರೋಪಿಗಳು ಮೊಬೈಲ್ ಡೇಟಾ ಅಳಿಸಿ ಹಾಕಿರುವುದು ಪತ್ತೆ. ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲು ಬಳಸಿದ್ದ ಡಿವೈಸ್ ಅನ್ನು ಆರೋಪಿಗಳ ಪೈಕಿ ಧನರಾಜ್ ಆನ್ಲೈನ್ ಮೂಲಕ ಖರೀದಿಸಿದ್ದ ಸಂಗತಿ ಬಹಿರಂಗ.
- ಜೂನ್ 22 - ರೇಣುಕಾಸ್ವಾಮಿಯ ಮೊಬೈಲ್ ಪತ್ತೆಯಾಗದ ಕಾರಣ, ಆತ ತನ್ನ ಹೆಸರಿನಲ್ಲಿ ಬಳಸುತ್ತಿದ್ದ ಡ್ಯೂಪ್ಲಿಕೇಟ್ ಸಿಮ್ ಕಾರ್ಡ್ ಒದಗಿಸುವಂತೆ ಸರ್ವಿಸ್ ಪ್ರೊವೈಡರ್ ಕಂಪನಿಗೆ ತನಿಖಾಧಿಕಾರಿಗಳ ಮನವಿ. ಆರೋಪಿಗಳನ್ನು 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜುಲೈ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಮನವಿ ಸಲ್ಲಿಸಿದ ತನಿಖಾಧಿಕಾರಿಗಳು. ಜೂನ್ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ.