ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಟ ದರ್ಶನ್ ಮತ್ತು ಸಹವರ್ತಿಗಳ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಅಥವಾ ನಾಳೆ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಸಂಬಂಧ ಈಗಾಗಲೇ 4 ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರು, ಇದೀಗ 30ಕ್ಕೂ ಹೆಚ್ಚು ಜನರ ಸಾಕ್ಷಿಗಳು, ಎಫ್‌ಎಸ್‌ಎಲ್ ಹಾಗೂ ಇತರೆ ತಾಂತ್ರಿಕ ತನಿಖೆಯ ದಾಖಲೆಗಳು ಸೇರಿ 40ಕ್ಕೂ ಹೆಚ್ಚು ಸಾಕ್ಷ್ಯಗಳನ್ನೊಳಗೊಂಡ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಯನ್ನು ಸಲ್ಲಿಸಲಿದ್ದೇವೆ ಎಂದು ಮೂಲಗಳು ತಿಳಿಸಿವೆ.
ಹತ್ಯೆ ನಡೆದ ಶೆಡ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಇದ್ದರು ಎಂಬುದಕ್ಕೆ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ಆರೋಪಿ ಪವನ್ ಎಂಬಾತನ ಮೊಬೈಲ್‌ನಲ್ಲಿದ್ದ ಕೆಲವು ಫೋಟೋಗಳನ್ನ ರಿಟ್ರೀವ್ ಮಾಡಲಾಗಿದ್ದು, ಅವುಗಳ ಮೂಲಕ ಘಟನಾ ಸ್ಥಳದಲ್ಲಿ ದರ್ಶನ್ ಇದ್ದರು ಎಂಬುದು ಸಾಬೀತಾಗಿದೆ. ಘಟನೆ ಬಳಿಕ ಪವನ್ ತನ್ನ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದ. ಆದರೆ, ಆತನ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಮಾಡಿದಾಗ ಫೋಟೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಗಳು ಜಾಮೀನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಬಳಿಕ ದರ್ಶನ್ ಆರೋಗ್ಯ ತಪಾಸಣೆಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸದ್ಯ ಜಾಮೀನಿನ ಮೇಲೆ ಹೊರಗಿರುವ ದರ್ಶನ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿಯನ್ನು ಅವರ ಪರ ವಕೀಲರು ಈಗಾಗಲೇ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಮಧ್ಯೆ ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ದರ್ಶನ್ ಆರೋಗ್ಯದ ಕುರಿತ ವೈದ್ಯಕೀಯ ವರದಿ ಹೈಕೋರ್ಟ್‌ಗೆ ಸಲ್ಲಿಕೆ: ನ.26ಕ್ಕೆ ವಿಚಾರಣೆ ನಿಗದಿ
ಇದನ್ನೂ ಓದಿ: ಮತ್ತೆ ಮಂಡ್ಯದಿಂದಲೇ ನನ್ನ ರಾಜಕಾರಣ ಪುನರಾರಂಭ: ನನ್ನ ಉಸಿರಿರೋವರೆಗೂ ದರ್ಶನ್ ನನ್ನ ಮಗ: ಸುಮಲತಾ ಅಂಬರೀಶ್