ಮೈಸೂರು: ಕೇವಲ ಸ್ಮರಣೆ ಮಾತ್ರದಿಂದ ದತ್ತಾತ್ರೆಯ ಸ್ವಾಮಿಗಳು ಸಂತುಷ್ಟರಾಗುತ್ತಾರೆ. ಜಗತ್ತಿನ ಎಲ್ಲಾ ಕಷ್ಟ ನಿವಾರಣೆಗೆ ದತ್ತಾತ್ರೇಯ ಸ್ಮರಣೆ ಮಾಡಬೇಕು ಎಂದು ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ನಗರದ ಅವಧೂತ ದತ್ತ ಪೀಠದಲ್ಲಿ ದತ್ತಾತ್ರೇಯ ಜಯಂತಿ ಪ್ರಯುಕ್ತ ಭಾನುವಾರ ಬೆಳಗ್ಗೆ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿರುವ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ನೆರವೇರಿಸಿ, ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಯುದ್ಧ ಭಯ ಕಾಡುತ್ತಿದೆ. ಎಲ್ಲೆಲ್ಲೂ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಶ್ರೀ ದತ್ತಾತ್ರೇಯ ಸ್ವಾಮಿ ಇಡೀ ಪ್ರಪಂಚವನ್ನು ರಕ್ಷಣೆ ಮಾಡಲಿ. ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ದತ್ತಾತ್ರೇಯ ಸ್ವಾಮಿಗಳು ತ್ರೇತಾಯುಗದ ಅವತಾರ ಪುರುಷರು. ದೇವತೆಗಳು ರಾಕ್ಷಸರು ಮತ್ತು ಮನುಷ್ಯರಿಗೂ ಕೂಡ ಅವರು ಗುರುಗಳು. ಮನುಷ್ಯನಿಗೆ ಬುದ್ಧಿ ಕೆಟ್ಟಾಗ ಆರೋಗ್ಯ ಹದಗೆಟ್ಟಾಗ, ದಿಕ್ಕು ತಪ್ಪಿದಾಗ ದತ್ತಾತ್ರೆಯರ ಸ್ಮರಣೆ ಮಾಡುವುದು ಒಳ್ಳೆಯದು. ದತ್ತಾತ್ರೇಯರು ಪೂರ್ಣ ವಿಷ್ಣು ಸ್ವರೂಪ. ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡಿದರೆ ವಿಷ್ಣುವಿನ ಆರಾಧನೆ ಮಾಡಿದಂತೆ, ಶಿವನನ್ನು ಆರಾಧನೆ ಮಾಡಿದಂತೆ, ಬ್ರಹ್ಮ ಅಂದರೆ ಜ್ಞಾನವನ್ನು ಆರಾಧನೆ ಮಾಡಿದಂತೆ ಎಂದರು.
ಇಡೀ ವಿಶ್ವ ಮತ್ತು ಪ್ರಜೆಗಳು ಪ್ರಜಾಪ್ರತಿನಿಧಿಗಳು ಮಕ್ಕಳಾದಿಯಾಗಿ ಎಲ್ಲ ರಂಗದಲ್ಲಿರುವವರಿಗೂ ದತ್ತಾತ್ರೇಯರು ಆಶೀರ್ವಾದ ಮಾಡಲೆಂದು ಲೋಕ ಕಲ್ಯಾಣಾರ್ಥವಾಗಿ ಈ ಅಭಿಷೇಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಂದು ಬೆಳಗ್ಗೆ ಪೌರ್ಣಮಿ ಹಾಗೂ ಶ್ರೀ ದತ್ತಾತ್ರೇಯ ಜಯಂತಿ ಪ್ರಯುಕ್ತ ಪವಮಾನ ಹೋಮ ಮತ್ತು ದತ್ತಾತ್ರೇಯ ವಜ್ರ ಮಂತ್ರ ಹೋಮ ನೆರವೇರಿತು. ಶ್ರೀ ಚಕ್ರ ಪೂಜೆ ಮತ್ತು ಪೂರ್ಣಾಹುತಿ ನೆರವೇರಿತು. ನಂತರ ಶ್ರೀ ದತ್ತಾತ್ರೇಯ ಸ್ವಾಮಿಗೆ ಭಕ್ತರಿಂದ ಸಹಸ್ರ ಕಳಶ ತೈಲಾಭಿಷೇಕ ಮಾಡಲಾಯಿತು. ಕೊಚ್ಚಿ ಆಶ್ರಮ ಭಜನಾ ತಂಡದಿಂದ ಶ್ರೀ ದತ್ತಾತ್ರೇಯ ಸ್ವಾಮಿ ನಾಮ ಸಂಕೀರ್ತನೆ ಹಾಗೂ ಅನಘ ವ್ರತ ಕೂಡಾ ನಡೆಯಿತು.
ಇದನ್ನೂ ಓದಿ: ಬಾಳೆಹೊನ್ನೂರು ಮಠಕ್ಕೆ ರೋಬೋಟಿಕ್ ಆನೆ ಉಡುಗೊರೆ ನೀಡಿದ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ದಂಪತಿ