ಮೈಸೂರು: ಲೋಕಸಭಾ ಚುನಾವಣೆಯ ಅಂಗವಾಗಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಎಲ್ಲರೂ ಚುನಾವಣೆಯ ಹಬ್ಬದಲ್ಲಿ ಭಾಗೀದಾರರಾಗಲು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿಯಿಂದ ರೀಲ್ಸ್ ಹಾಗೂ ವಿಡಿಯೋ ಮಾಡುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಆಸಕ್ತರು ಮತದಾನದ ಮಹತ್ವ, ಪ್ರತಿ ಓಟಿನ ಮೌಲ್ಯ, ನೈತಿಕ ಮತದಾನ ಮತ್ತು ಎಲ್ಲಾ ವರ್ಗಗಳ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುವ (ಪಕ್ಷಾತೀತವಾಗಿ ಯಾವುದೇ ರಾಜಕೀಯ ವ್ಯಕ್ತಿ ಹೋಲಿಕೆ ಇಲ್ಲದಂತೆ) ಕುರಿತಾಗಿ ಗರಿಷ್ಠ 2 ನಿಮಿಷ ಅವಧಿಯ ರೀಲ್ಸ್ ಹಾಗೂ ವಿಡಿಯೋಗಳನ್ನು ತಯಾರಿಸಿ sveepmysuru2018@gmail.com ಈ ಇ-ಮೇಲ್ ವಿಳಾಸಕ್ಕೆ ಏ.10 ರೊಳಗೆ ಕಳುಹಿಸಿಕೊಡಬಹುದಾಗಿದೆ. ಉತ್ತಮ ಸಂದೇಶವುಳ್ಳ ಮೂರು ಆಯ್ಕೆಗಳಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಮಂಗಳವಾರ 5 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಪಕ್ಷೇತರ ಅಭ್ಯರ್ಥಿಗಳಾಗಿ ಶಿವನಂಜಯ್ಯ, ಎಂ.ರಂಗಸ್ವಾಮಿ, ರಾಮಮೂರ್ತಿ.ಎಂ, ಶ್ರೀನಿವಾಸ.ಎಂ ನಾಮಪತ್ರ ಸಲ್ಲಿಸಿದ್ದು, ಉತ್ತಮ ಪ್ರಜಾಕೀಯ ಪಕ್ಷದಿಂದ ಲೀಲಾವತಿ ಜೆ.ಎಸ್. ನಾಮಪತ್ರ ಸಲ್ಲಿಸಿದ್ದಾರೆ. ಮೊದಲನೇ ದಿನದಿಂದ ಇಲ್ಲಿಯವರೆಗೆ ಒಟ್ಟು 12 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆಯಾಗಿರುತ್ತದೆ.

ರಸ್ತೆಗೆ ಬದಲಿ ಮಾರ್ಗ: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಏ.3ರಂದು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆಯಲ್ಲಿ ಎಂ.ಎಂ.ರಸ್ತೆಯಲ್ಲಿ ಜನ ಹಾಗೂ ಸಂಚಾರದಟ್ಟಣೆ ಹೆಚ್ಚಾಗಲಿರುವ ಕಾರಣ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಾರ್ವಜನಿಕರು ಎಂ.ಎಂ.ರಸ್ತೆ ಬದಲಿಗೆ ಬೇರೆ ಮಾರ್ಗವನ್ನು ಬಳಸಲು ತಿಳಿಸಲಾಗಿದೆ.
ನಜರ್‌ಬಾದ್ ವೃತ್ತದಿಂದ ಆರ್.ಮಹದೇವಪ್ಪ ವೃತ್ತಕ್ಕೆ ಸಂಚರಿಸುವ ವಾಹನಗಳು ನಜರ್ ಬಾದ್ ವೃತ್ತ, ವಸಂತ ಮಹಲ್ ಜಂಕ್ಷನ್, ಟ್ಯಾಂಕ್ ಬಂಡ್ ರಸ್ತೆ, ಬುಲೆವಾರ್ಡ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಟಿ.ಎನ್.ಪುರ ರಸ್ತೆ,ಟಿ ಜಂಕ್ಷನ್ ಮೂಲಕ ಮುಂದೆ ಸಾಗಬಹುದು.
ಆರ್.ಮಹದೇವಪ್ಪ ವೃತ್ತದಿಂದ ನಜರ್‌ಬಾದ್ ವೃತ್ತಕ್ಕೆ ಸಂಚರಿಸುವ ವಾಹನಗಳು ಆರ್.ಮಹದೇವಪ್ಪ ವೃತ್ತ, ಟಿ.ಎನ್.ಪುರ ರಸ್ತೆ, ಟಿ.ಜಂಕ್ಷನ್, ಸಂಗೊಳ್ಳಿ ರಾಯಣ್ಣ ವೃತ್ತ, ಬುಲೆವಾರ್ಡ್ ವೃತ್ತ, ಟ್ಯಾಂಕ್ ಬಂಡ್ ರಸ್ತೆ, ವಸಂತ್ ಮಹಲ್ ಜಂಕ್ಷನ್ ಮೂಲಕ ಮುಂದೆ ಸಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.