ಬೆಂಗಳೂರು: ಅಪಘಾತ ತಪ್ಪಿಸುವ ಉದ್ದೇಶ, ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಗರದ ರೇಸ್ ಕೋರ್ಸ್ ವೃತ್ತದ ಜಂಕ್ಷನ್ (ಟ್ರಿಲೈಟ್) ಮರು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.
ಬಳ್ಳಾರಿ ರಸ್ತೆ ವಿಸ್ತರಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣಾ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ (ಯೋಜನೆಗಳು- ಕೇಂದ್ರ) ವಿಭಾಗದ ಮುಖ್ಯ ಎಂಜಿನಿಯರ್ ಎಂ.ಲೋಕೇಶ್ ಪ್ರಮಾಣಪತ್ರ ಸಲ್ಲಿಸಿ ಈ ಸ್ಪಷ್ಟನೆ ನೀಡಿದ್ದಾರೆ.
ಟ್ರಿಲೈಟ್ ಜಂಕ್ಷನ್‌ನಲ್ಲಿ ಶಿವಾನಂದ ಮೇಲ್ಸೇತುವೆ ಕಡೆಗೆ ಹೋಗುವ ರಸ್ತೆ ತೀವ್ರ ತಿರುವಿನಿಂದ (ಕರ್ವ್) ಕೂಡಿದ್ದು, ಅಪಘಾತಗಳು ಸಂಭವಿಸುವ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಜಂಕ್ಷನ್ ಕೇಂದ್ರ ಭಾಗದಲ್ಲಿರುವ ಪ್ರತಿಮೆಗಳಿರುವ ತೆರವುಗೊಳಿಸಬೇಕು ಹಾಗೂ ಅಲ್ಲಿನ ಐಲ್ಯಾಂಡ್ ಅನ್ನು ಸರಿಪಡಿಸಬೇಕು ಎಂದು ತಿಳಿಸಿ 2023ರ ಜ.4ರಂದು ನಗರ ಸಂಚಾರ ಪೊಲೀಸ್ (ಪೂರ್ವ) ವಿಭಾಗದ ಉಪ ಪೊಲೀಸ್ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದಿದ್ದರು.
ಆ ಪತ್ರವನ್ನು ಪರಿಗಣಿಸಿ ಕುದುರೆ ಪ್ರತಿಮೆಗಳನ್ನು ತೆರವುಗೊಳಿಸಲಾಗಿದೆ. ಜಂಕ್ಷನ್ ಅನ್ನು ಮರು ವಿನ್ಯಾಸಗೊಳಿಸಲಾಗಿದ್ದು, ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಮಾರ್ಗಸೂಚಿಗಳ ಅನ್ವಯ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಜಂಕ್ಷನ್ ಮರು ಅಭಿವೃದ್ಧಿಯಿಂದ ರಸ್ತೆ ಅಗಲ ಕಡಿಮೆಯಾಗಿದೆ ಎಂಬುದು ಅರ್ಜಿದಾರರ ಊಹೆಯಾಗಿದೆ. ಸಂಚಾರ ನಿರ್ವಹಣೆಗೆ ಜಂಕ್ಷನ್ ಅಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಜಂಕ್ಷನ್ ಮರು ವಿನ್ಯಾಸದ ಬಳಿಕ ಖಾಲಿ ಪ್ರದೇಶವನ್ನು ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ನವೀನ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಜಂಕ್ಷನ್‌ನಲ್ಲಿ ಸಾರ್ವಜನಿಕ ಜಾಗ ಕಲ್ಪಿಸಲಾಗಿದೆ. ಪಾದಚಾರಿಗಳು ಸುರಕ್ಷತೆಯಿಂದ ಜಂಕ್ಷನ್ ದಾಟಲು ಅನುವು ಮಾಡಿಕೊಡಲಾಗಿದೆ. ಮರು ಅಭಿವೃದ್ಧಿಯಿಂದ ವಾಹನಗಳ ಸಂಚಾರ ಸುಗಮವಾಗಿದೆ. ಪಾದಚಾರಿಗಳು ಸರಕ್ಷಿತವಾಗಿ ರಸ್ತೆ ದಾಟುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಈ ಪ್ರಮಾಣ ಪತ್ರ ದಾಖಲಿಸಿಕೊಂಡ ಹೈಕೋರ್ಟ್, ಪಕ್ಷಗಾರರು ಪ್ರಕರಣ ಕುರಿತ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮಾ.7ಕ್ಕೆ ಮುಂದೂಡಿತು. ಪ್ರಕರಣದ ಹಿಂದಿನ ವಿಚಾರಣೆ ವೇಳೆ, ಅರ್ಜಿದಾರರು ಮಧ್ಯಂತರ ಅರ್ಜಿ ಸಲ್ಲಿಸಿ, ಟ್ರಿಲೈಟ್ ಜಂಕ್ಷನ್ ಅನ್ನು ಹೊಸದಾಗಿ ಅಭಿವೃದ್ಧಿ ಮಾಡುತ್ತಿರುವುದರಿಂದ ರಸ್ತೆಯ ಅಗಲ ಕಡಿಮೆಯಾಗಿದೆ. ಪಾದಚಾರಿಗಳು ಸುರಕ್ಷತೆಯಿಂದ ಓಡಾಡಲು ಆಗುತ್ತಿಲ್ಲ. ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ಆಕ್ಷೇಪಿಸಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್, ಅರ್ಜಿದಾರರ ಆಕ್ಷೇಪಣೆಗೆ ಉತ್ತರಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿತ್ತು.
ಲೋಕ ಅದಾಲತ್ ದಿನಾಂಕ ಬದಲಾವಣೆ: ಪ್ರಸಕ್ತ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್ ಮಾರ್ಚ್ 9ಕ್ಕೆ ಬದಲಾಗಿ ಮಾರ್ಚ್ 16ಕ್ಕೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ. ಕೆಎಸ್‌ಎಲ್‌ಎಸ್‌ಎ ಪ್ಯಾಟ್ರೋನ್-ಇನ್ ಚೀಫ್ ಆದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ದಿನಾಂಕ ಬದಲಾವಣೆಗೆ ಅನುಮೋದಿಸಿದ್ದಾರೆ. ಹೀಗಾಗಿ, ಮಾರ್ಚ್ 16 ರಂದು ಲೋಕ ಅದಾಲತ್ ನಡೆಸುವಂತೆ ನನಗೆ ನಿರ್ದೇಶನ ನೀಡಲಾಗಿದೆ. ಅಂದು ಎನ್‌ಐ ಕಾಯಿದೆ ಪ್ರಕರಣಗಳು, ಬ್ಯಾಂಕ್ ಮತ್ತು ವಾಣಿಜ್ಯ ದಾವೆಗಳಿಗೆ ವಿಶೇಷ ಆದ್ಯತೆ ನೀಡುವಂತೆ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಜೈಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದ ಬೆಂಗಳೂರು ವಕೀಲರ ಸಂಘ, ಮಾ.8 ರಂದು ಶಿವರಾತ್ರಿ ಹಬ್ಬವಿದೆ. ಈ ಹಿನ್ನೆಲೆಯಲ್ಲಿ ಲೋಕ ಅದಾಲತ್ ಬದಲಾವಣೆ ಮಾಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಬೆಂಗಳೂರಿನ ಜೈಲಿನಲ್ಲಿ ಖೈದಿಗಳಿಗೆ ಉಗ್ರವಾದಕ್ಕೆ ಪ್ರೇರಣೆ; 7 ರಾಜ್ಯಗಳ 17 ಸ್ಥಳಗಳಲ್ಲಿ ಎನ್ಐಎ ಶೋಧ