ಬೆಳಗಾವಿ: ಬಿಜೆಪಿಯಲ್ಲಿನ ಬಂಡಾಯದಿಂದ ನಮಗೆ ಅನುಕೂಲ ಆಗಬಹುದು. ಇಡೀ ರಾಜ್ಯದಲ್ಲಿ ಬಂಡಾಯದಿಂದ ಬಿಜೆಪಿಗೆ ಸಮಸ್ಯೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿನ ಬಂಡಾಯ ಕಾಂಗ್ರೆಸ್ಗೆ ಅನುಕೂಲ ಆಗಬಹುದಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಕಡಿಮೆ ಇರುವ ಬಗ್ಗೆ ಮಾತನಾಡಿ, ಅದು ನಿಜ, ಅದರಲ್ಲಿ ಬೇರೆ ಪ್ರಶ್ನೆ ಇಲ್ಲ. ಆದರೆ, ಸಂಘಟನೆ ಹೆಚ್ಚಿಸಲು ನಮ್ಮ ಕಾರ್ಯಕರ್ತರಿಗೆ ಟಾಸ್ಕ್ ಕೊಟ್ಟಿದ್ದೇವೆ. ಈ ಬಾರಿ ಹೆಚ್ಚು ವೋಟ್ ಪಡೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇನ್ನು ಅಧಿಕೃತ ಘೋಷಣೆ ಆಗಬೇಕಲ್ಲವೇ? ಯಾವಾಗ ಆಗುತ್ತೋ ಗೊತ್ತಿಲ್ಲ. ಅದು ದೆಹಲಿಯವರಿಗೆ ಗೊತ್ತು. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಯಾರೇ ನಿಂತರೂ ಪಕ್ಷದ ಅಭ್ಯರ್ಥಿ ಗೆಲ್ಲಿಸೋದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಯತ್ನಾಳ್ ಹೆಸರು ಕೇಳಿ ಬರುತ್ತಿದೆ ಎಂಬ ವಿಚಾರವಾಗಿ ಮಾತನಾಡಿ, ನಾವು ಬಿಜೆಪಿ ಪಕ್ಷ ಅಂತಾ ಅಷ್ಟೇ ನೋಡುತ್ತೇವೆ ಹೊರತು ವ್ಯಕ್ತಿಗತವಾಗಿ ಅಲ್ಲ. ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಪಕ್ಷ ಅಂತಾನೇ ತಿಳಿದುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು. ಶೆಟ್ಟರ್ ಗೋಬ್ಯಾಕ್ ಅಭಿಯಾನ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಷಯ. ಯಾರೇ ಬಂದರೂ ನಾವು ಎದುರಿಸಲು ತಯಾರಿದ್ದೇವೆ. ಚುನಾವಣೆಗೆ ಇನ್ನು 45 ದಿನಗಳಿದ್ದು, ಅಲ್ಲಿಯವರೆಗೂ ನಮ್ಮ ಪರವಾಗಿ ವಾತಾವರಣ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಹಾಲಿ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾಧ್ಯಕ್ಷರಿಗೆ ಬೇರೆ ಹುದ್ದೆ ನೀಡಿದ್ದರಿಂದ ಬೇರೆಯವರಿಗೆ ಆ ಸ್ಥಳಗಳನ್ನು ನೀಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆ ಉತ್ತರಿಸಿ, ಖಂಡಿತವಾಗಲೂ ಮಾಡುತ್ತೇವೆ. ಅದು ನಮ್ಮ ಕೈಯಲ್ಲೆ ಇದೆ. ಅದನ್ನು ಯಾವಾಗ ಬೇಕಾದರೂ ಮಾಡಬಹುದು ಎಂದರು.
ಇದನ್ನೂ ಓದಿ: ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಜತೆ ಸಂಧಾನಕ್ಕೆ ಮುಂದಾಗಲ್ಲ: ಬಿ ಎಸ್ ಯಡಿಯೂರಪ್ಪ
ಮತ್ತೊಂದೆಡೆ, ಬೆಳಗಾವಿ ಕ್ಷೇತ್ರದ ಟಿಕೆಟ್ ನನಗೆ ಸಿಕ್ಕೇ ಸಿಗುತ್ತದೆ'' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎರಡು ದಿನಗಳೊಳಗೆ ಲಿಸ್ಟ್ ಬಿಡುಗಡೆಯಾಗುತ್ತೆ. ವರಿಷ್ಠರನ್ನು ನಾನು ಭೇಟಿಯಾಗಿದ್ದೇನೆ. ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಜೊತೆಯೂ ಚರ್ಚಿಸಿದ್ದೇನೆ. ಬಿಜೆಪಿ ಸ್ಥಳೀಯ ನಾಯಕರ ಜೊತೆಗೆ ಸಮಾಲೋಚನೆ ಮಾಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಿದೆ. ಪ್ರಧಾನಿ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗುತ್ತೆ. ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿದಾಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.