ಧಾರವಾಡ: ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ರಥೋತ್ಸವದ ಸಮಯದಲ್ಲಿ ತೇರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಮ್ಮದಸಾಬ ಹಸನಸಾಬ ಮೊಕಾಶಿ (60) ಮೃತ ವ್ಯಕ್ತಿಯಾಗಿದ್ದಾರೆ.
ಬಸವ ಜಯಂತಿ ಹಿನ್ನೆಲೆ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ವೇಳೆ ರಥೋತ್ಸವ ನಡೆಯುತ್ತಿತ್ತು. ಈ ವೇಳೆ ಭಕ್ತಾಧಿಗಳ ಸಂಖ್ಯೆ ಅಪಾರವಾಗಿತ್ತು. ರಥಕ್ಕೆ ಎಸೆಯುವ ಉತ್ತತ್ತಿ ಆರಿಸಿಕೊಳ್ಳಲು ಹೋಗಿ ರಥದ ಚಕ್ರಕ್ಕೆ ಸಿಲುಕಿ ಹಸನಸಾಬ್ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರಥೋತ್ಸವ ಅರ್ಧಕ್ಕೆ ನಿಂತಿತು. ಮೃತದೇಹವನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲಕೃಷ್ಣ ಬ್ಯಾಕೋಡ ಭೇಟಿ, ಪರಿಶೀಲನೆ ನಡೆಸಿದರು.
ಇತ್ತೀಚಿನ ಪ್ರಕರಣ, ಲಚ್ಯಾಣ ಸಿದ್ದಲಿಂಗ ಮುತ್ಯಾ ಜಾತ್ರೆಯಲ್ಲಿ ದುರಂತ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವದ ವೇಳೆಯಲ್ಲಿ ರಥದ ಚಕ್ರಕ್ಕೆ ಸಿಲುಕಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಭಿಷೇಕ್ ಮುಜಗೊಂಡ (17), ಸೋಬು ಸಿಂದೆ (51), ಸುರೇಶ್ ಕಟಕದೊಂಡ (36) ಸಾವನ್ನಪ್ಪಿದ್ದಾರೆಂದು ಗುರುತಿಸಲಾಗಿದೆ.
ಇತ್ತೀಚೆಗೆ ನಡೆದ ರಥೋತ್ಸವದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ರಥ ಸಾಗುವ ಸಮಯದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಆಯತಪ್ಪಿ 7 ಜನ ರಥದ ಚಕ್ರಕ್ಕೆ ಸಿಲುಕಿಕೊಂಡಿದ್ದರು. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಿಸಿಲನಾಡು ಕಲಬುರಗಿಯಲ್ಲಿ ಮಳೆ ಅಬ್ಬರ; ಸಿಡಿಲಿಗೆ ಮಹಿಳೆ ಬಲಿ - RAIN IN KALABURAGI