ಬೆಂಗಳೂರು/ಧಾರವಾಡ: ಇಂದು ಮುಂಜಾನೆ ಕೊನೆಯುಸಿರೆಳೆದ ಈನಾಡು ಗ್ರೂಪ್ ಅಧ್ಯಕ್ಷ, ರಾಮೋಜಿ ಫಿಲ್ಮ್ ಸಿಟಿಯ ಸಂಸ್ಥಾಪಕ, ಪದ್ಮ ವಿಭೂಷಣ ರಾಮೋಜಿ ರಾವ್ ಅವರ ನಿಧನಕ್ಕೆ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯ ಬಿ.ವೈ. ವಿಜಯೇಂದ್ರ, ಶಾಸಕ ವಿನಯ ಕುಲಕರ್ಣಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿ.ವೈ.ವಿಜಯೇಂದ್ರ, "ಈ ಟಿವಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ ದಶಕಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಸಂಚಲನ ಉಂಟು ಮಾಡಿದ, ಮಾಧ್ಯಮ ರಂಗದ ಭೀಷ್ಮ ಎಂದೇ ಪ್ರಸಿದ್ಧಿ ಪಡೆದಿರುವ ರಾಮೋಜಿ ಫಿಲ್ಮ್ ಸಿಟಿಯ ಸಂಸ್ಥಾಪಕ ಶ್ರೀ ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಕೋರುತ್ತೇನೆ. ಮಾಧ್ಯಮ ರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ಕನಸುಗಾರ, ಭಾರತೀಯ ಚಿತ್ರರಂಗ ಹಾಗೂ ಮಾಧ್ಯಮ ರಂಗಕ್ಕೆ ಅನನ್ಯ ಕೊಡುಗೆ ನೀಡಿರುವ ಶ್ರೀ ರಾಮೋಜಿ ರಾವ್ ಅವರು ಇನ್ನಿಲ್ಲದಿರುವುದು ದೇಶದ ಸಾಂಸ್ಕೃತಿಕ ಲೋಕದ ನಷ್ಟವೂ ಆಗಿದೆ. ಅವರ ಕುಟುಂಬ ವರ್ಗಕ್ಕೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ." ಎಂದು ಪ್ರಾರ್ಥಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, "ಈನಾಡು ಹಾಗೂ ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ನನ್ನ ಸಂತಾಪ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅರಿಗೆ ನೀಡಲಿ" ಎಂದು ತಿಳಿಸಿದ್ದಾರೆ.
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಸಂತಾಪ ಸೂಚಿಸಿದ್ದು, "ಈನಾಡು ಗ್ರೂಪ್ ಮತ್ತು ರಾಮೋಜಿ ಫಿಲ್ಮ್ ಸಿಟಿಯ ದೂರದೃಷ್ಟಿಯ ಅಧ್ಯಕ್ಷರಾದ ರಾಮೋಜಿ ರಾವ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಭಾರತೀಯ ಸಿನಿಮಾ, ಮಾಧ್ಯಮ ಮತ್ತು ಪತ್ರಿಕೋದ್ಯಮಕ್ಕೆ ಅವರ ಗಮನಾರ್ಹ ಕೊಡುಗೆಗಳು ಸ್ಫೂರ್ತಿ ನೀಡುತ್ತಲೇ ಇರುತ್ತವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ನನ್ನ ಸಂತಾಪ" ಎಂದು ತಮ್ಮ ಫೇಸ್ಬುಕ್ ಜಾಲತಾಣದ ಮೂಲಕ ಕೊನೆಯ ನಮಸ್ಕಾರ ತಿಳಿಸಿದ್ದಾರೆ.