ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಯ ಮುಂದುವರಿದ ಭಾಗ ಇಂದಿನ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟದ ಪ್ರಕರಣ. ಎಫ್ಎಸ್ಎಲ್ ವರದಿ ತಿರುಚುವ ಕಾರಣಕ್ಕಾಗಿ ವರದಿ ಬಹಿರಂಗವನ್ನು ವಿಳಂಬ ಮಾಡಲಾಗುತ್ತಿದೆ. ಈ ಘಟನೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಒಂದಾದರೊಂದು ಘಟನೆ ನಡೆಯುತ್ತಿವೆ. ಸರಣಿ ಘಟನೆಗಳು ನಡೆದಿವೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ನಿಂದ ಟಿಪ್ಪು ಜಯಂತಿ ಮೂಲಕ ಹಿಂದೂ ಮನೆಗಳ ಮೇಲೆ ಕಲ್ಲು ತೂರಿ ಬೆದರಿಕೆ ಹಾಕಿದ ಘಟನೆಯೂ ನಡೆಯಿತು.
ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಆರೋಪಿಗಳು ಅಮಾಯಕರು ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ಶಾಸಕರೇ ಪತ್ರ ಬರೆದರು. ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಪರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕೂಗಿದ್ದಾರೆ, ಇದನ್ನು ಸಿಎಂ, ಡಿಸಿಎಂ, ಸಂಪುಟ ಸಹಿಸಿಕೊಂಡು ಬಂದಿದೆ. ಇವರ ಮೈ ಬ್ರದರ್ ಪಾಲಿಸಿ ರಾಜ್ಯದ ಜನರ ರಕ್ಷಣೆ ವಿಚಾರದಲ್ಲಿ ಯಕ್ಷಪ್ರಶ್ನೆ ಉದ್ಭವವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನೀತಿ ಕನ್ನಡಿಗರ ಸುರಕ್ಷತೆಗೆ ಪ್ರಶ್ನಾರ್ಥಕ ಚಿಹ್ನೆ ಹುಟ್ಟುಹಾಕಿದೆ, ಇಂದು ನಡೆದಿದ್ದು ಐಐಡಿ ಬ್ಲಾಸ್ಟ್ ಎಂದು ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ. ಪಾಕ್ ಘೋಷಣೆ ಮುಂದುವರಿದ ಭಾಗವಾಗಿ ಇಂದಿನ ಬ್ಲಾಸ್ಟ್ ಆಗಿದೆ. ಇವರ ತುಷ್ಟೀಕರಣದ ರಾಜನೀತಿ, ಓಲೈಕೆ ರಾಜಕಾರಣ ರಾಜ್ಯದ ಸುರಕ್ಷತೆಗೆ ಗಂಡಾಂತರ ತಂದಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ:ಪಾಕ್ ಪರ ಘೋಷಣೆ ಆರೋಪ ಪ್ರಕರಣದಲ್ಲಿ ಸರ್ಕಾರ ಕಾಯುತ್ತಿದ್ದ ಎಫ್ಎಸ್ಎಲ್ ವರದಿ ಬಂದಿದೆ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ನಿಜ ಎಂದು ವರದಿ ಬಂದಿದೆ. ಹಾಗಾಗಿ ಅದನ್ನು ಮುಚ್ಚಿಹಾಕಲು ಬೋಗಸ್ ವರದಿ ಸಿದ್ದಪಡಿಸಲು ವರದಿ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ.
ಸಮಾಜ ವಿರೋಧಿ ಶಕ್ತಿಗಳ ವಿಚಾರದಲ್ಲಿ ಮೃದು ಧೋರಣೆ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪರಿಣಾಮವನ್ನು ರಾಜ್ಯದ ಜನತೆ ಅನುಭವಿಸಬೇಕಾಗಿದೆ. ಹಾಗಾಗಿ ರಾಮೇಶ್ವರಂ ಕೆಫೆ ಬ್ಲಾಸ್ಟ್ ಗಂಭೀರವಾಗಿ ಪರಿಗಣಿಸಿ ತಕ್ಷಣ ಎನ್ಐಎಗೆ ಹಸ್ತಾಂತರ ಮಾಡಬೇಕು. ರಾಜ್ಯದ ಜನತೆ ಭಯಭೀತರಾಗಿದ್ದಾರೆ ಹಾಗಾಗಿ ಈ ಕೇಸ್ ವಿಳಂಬ ಮಾಡದೆ ಎನ್ಐಎಗೆ ಕೊಡಬೇಕು ಎಂದು ಆಗ್ರಹಿಸಿದರು.
ಸಂಪೂರ್ಣ ಬಹಮತ ಕೊಟ್ಟು ಅಧಿಕಾರಕ್ಕೆ ತಂದಾಗ ನಿಮ್ಮ ಓಲೈಕೆ ರಾಜಕಾರಣ, ಪಾಕ್ ಪರ ಘೋಷಣೆ ಕೂಗಿದವನ ಕಾಲು ಮರಿದು ಒಳಗೆ ಹಾಕದ ಕಾರಣ ಇಂತಹ ಘಟನೆ ನಡೆಯುತ್ತಿವೆ. ಗುಲ್ಬರ್ಗಾದಲ್ಲಿ ಬಿಜೆಪಿಯ ಇಬ್ಬರ ಹತ್ಯೆಯಾಗಿದೆ.ಇದನ್ನೆಲ್ಲಾ ನೋಡಿದರೆ ಕಾಂಗ್ರೆಸ್ ಸರ್ಕಾರದ ಮೃದುಧೋರಣೆ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ ರಾಜ್ಯದ ಜನತೆಯ ಸುರಕ್ಷತೆಗೂ ಗುಂಡಾಂತರ ಬಂದಿದೆ. ಹಿಂದೆ ಮೈಬ್ರದರ್ ಎಂದ ಡಿ ಕೆ ಶಿವಕುಮಾರ್ ನಾಳೆ ಏನು ಹೇಳುತ್ತಾರೋ ಗೊತ್ತಿಲ್ಲ ಎಂದು ದೂರಿದರು.
ಬಿಜೆಪಿ ಇದರಲ್ಲಿ ರಾಜಕೀಯ ಮಾಡಲ್ಲ, ಇಂಥ ಕೀಳು ಮಟ್ಟಕ್ಕೆ ಬಿಜೆಪಿ ಇಳಿಯಲ್ಲ, ಕನ್ನಡಿಗರ ಸುರಕ್ಷತೆಯ ವಿಷಯ ಇದೆ. ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಎಲ್ಲದಕ್ಕೂ ರಾಜಕೀಯ ಬಣ್ಣ ಹಚ್ಚಿ ಬಿಜೆಪಿ ಮುಖಕ್ಕೆ ಮಸಿ ಬಳಿಯಬೇಡಿ. ತಾಕತ್ತಿದ್ದರೆ ಎನ್ಐಎಗೆ ಹಸ್ತಾಂತರ ಮಾಡಿ, ದೇಶದ್ರೋಹಿಗಳ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಬೇಡಿ ಎಂದು ವಿಜಯೇಂದ್ರ ಒತ್ತಾಯಿಸಿದರು.
ಎಲ್ಲದಕ್ಕೂ ಉತ್ತರ ನೀಡುವ ಪ್ರಿಯಾಂಕ ಖರ್ಗೆ ಯಾವ ಇಲಾಖೆ ನಿರ್ವಹಿಸುತ್ತಾರೆ ಎಂದು ಜನತೆ ಅನುಮಾನ ಬರುತ್ತಿದೆ, ಅವರೇ ಮುಖ್ಯಮಂತ್ರಿ ರೀತಿ ವರ್ತಿಸುತ್ತಿದ್ದಾರೆ, ಗುಲ್ಬರ್ಗಾದಲ್ಲಿ ಕೋಳಿ ಸಮುದಾಯದ ವ್ಯಕ್ತಿ ಕೊಲೆಯಾದರೂ ಹೋಗಿ ನೋಡಿಲ್ಲ. ಪ್ರಕರಣದ ತನಿಖೆಗೂ ಮೊದಲೇ ಸ್ಪೋಟ ಪ್ರಕರಣಕ್ಕೆ ವ್ಯವಹಾರ ಇತ್ಯಾದಿ ಕಾರಣಗಳ ಪ್ರಸ್ತಾಪ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ನಡೆ ಸರಿಯಲ್ಲ, ಇದೇ ರೀತಿ ಅವರ ವರ್ತನೆ ಮುಂದುವriದರೆ ದೇಶದ್ರೋಹಿಗಳ ಪಟ್ಟಿಯಲ್ಲಿ ಡಿ ಕೆ ಶಿವಕುಮಾರ್ ಹೆಸರನ್ನೂ ಸೇರಿಸಬೇಕಾಗಲಿದೆ, ನಿಮ್ಮ ಈ ಕೆಟ್ಟ ನಡವಳಿಕೆಯಿಂದಾಗಿಯೇ ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ ಎಂದರು.
ಇದನ್ನೂಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: 9 ಮಂದಿಗೆ ಗಾಯ, ತನಿಖಾ ತಂಡಗಳಿಂದ ಪರಿಶೀಲನೆ