ಚಾಮರಾಜನಗರ: ಸೋಮವಾರ (ಜ.22) ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ರಾಮ ಸಂಚಾರ ನಡೆಸಿದ ಹಲವು ಸ್ಥಳಗಳಿವೆ. ವನವಾಸದ ಸಂದರ್ಭದಲ್ಲಿ ಚಾಮರಾಜನಗರದ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರ ಬಗ್ಗೆ ಪ್ರತೀತಿ, ಪುರಾಣಗಳಲ್ಲಿ ಉಲ್ಲೇಖವಿದೆ.
ರಾಮನ ಪಾದವೇ ಮಂದಿರವಾಗಿ, ದೇವರ ಹೆಜ್ಜೆ ಗುರುತನ್ನು ಶ್ರದ್ಧಾ ಭಕ್ತಿಯಿಂದ ನಿತ್ಯ ಪೂಜಿಸುವ ಸ್ಥಳವೊಂದಿದೆ. ಇಲ್ಲಿ ಪಾದದ ಗುರುತಿಗೆ ನಮಸ್ಕರಿಸಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು. ತಮಿಳುನಾಡಿನ ತಾಳವಾಡಿ ತಾಲೂಕಿನ ರಾಮಪುರ ಸಮೀಪದ ಅರಣ್ಯದ ನಡುವೆ ರಾಮರಪಾದ ಎಂಬ ದೇಗುಲವಿದೆ. ವನವಾಸ ಸಮಯದಲ್ಲಿ ಶ್ರೀರಾಮ ಒಂದು ದಿನ ಇಲ್ಲಿ ಬಂದು ತಂಗಿದ್ದು, ಹೊರಡುವ ವೇಳೆ ಎದುರಾದ 'ತಲ' ಎಂಬ ರಾಕ್ಷಸನನ್ನು ಸಂಹರಿಸಲು ಹೂಡಿದ ಬಾಣ ಆತನ ತಲೆಯನ್ನು ಹಾದು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನು ಸೀಳಿದೆ ಎನ್ನುವುದು ಭಕ್ತರ ನಂಬಿಕೆ.
ಪುರಾಣದಲ್ಲಿ ಉಲ್ಲೇಖವಾದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತಿದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿದೆ. ಈ ಕುಳಿಯನ್ನು ರಾಮನ ಪಾದವೆಂದು ನಿತ್ಯ ಅಗ್ರಪೂಜೆ ಸಲ್ಲಿಸಲಾಗುತ್ತದೆ. ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ನಡೆಯುವ ಪೂಜೆಗೆ ವಿವಿಧ ಭಾಗಗಳಿಂದ ರಾಮ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೆ, ರಾಮ- ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ದಿಗಾಗಿ ಬೇಡಿದರೆ ಆತ ಇಷ್ಟಾರ್ಥ ಸಿದ್ಧಿಸುತ್ತಾನೆ ಎನ್ನುವುದು ನಂಬಿಕೆ. ಮಕ್ಕಳಾಗದೆ ಇರುವವರು ಕೂಡ ಇಲ್ಲಿಗೆ ಬಂದು ಸಂತಾನ ಭಾಗ್ಯಕ್ಕಾಗಿ ಬೇಡಿಕೊಳ್ಳುತ್ತಾರೆ ಎನ್ನುತ್ತಾರೆ ಭಕ್ತರು.
ದಶರಥನಿಗೆ ಪಿಂಡ ಪ್ರಧಾನ ಮಾಡಿದ ಪುತ್ರರು: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪದ ಪಟ್ಟಶೆಟ್ಟಿ ದೊಡ್ಡಿ ಸಮೀಪದಲ್ಲಿ ಗವಿರಾಯಸ್ವಾಮಿ ಎಂಬ ಕ್ಷೇತ್ರವಿದ್ದು ರಾಮರು ಇಲ್ಲಿ ಬೇಟಿ ಕೊಟ್ಟಿದ್ದರು ಎಂಬ ನಂಬಿಕೆ ಇದೆ. ರಾಮ, ಲಕ್ಷ್ಮಣರು ವನವಾಸ ಮುಗಿಸಿ ಬರುವ ವೇಳೆ ತಮ್ಮ ತಂದೆಯವರಿಗಾಗಿ ಪಿಂಡ ಪ್ರಧಾನಕ್ಕಾಗಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡರೆಂಬ ನಂಬಿಕೆ ಇದೆ. ಲಕ್ಷ್ಮಣ ಬಿಲ್ಲು ಬಾಣವನ್ನು ಸೇತುವೆ ಸಮೀಪ ಬಂದು ಕೆಳಗಿಟ್ಟ ವೇಳೆ ಇದನ್ನು ಗಮನಿಸಿ ಅಚ್ಚರಿಗೊಂಡ ಶ್ರೀರಾಮ ಇಲ್ಲಿನ ಮಣ್ಣಿಗೆ ನಮಸ್ಕರಿಸಿ ಪರೀಕ್ಷಿಸಿದಾಗ ಇಲ್ಲಿ ವಿಶೇಷ ಶಕ್ತಿ ಇದೆ. ದಹನ ಮಾಡುವ ವೇಳೆ ತಲೆ ಹೋಳಾಗುವ ಪದ್ದತಿ ಇದೆ ಎಂದು ತಿಳಿದು ರಂಗನಾಥಸ್ವಾಮಿಯ ಗುಡ್ಡದ ಸಮೀಪ ಮೂರು ಕಡೆಗಳಲ್ಲಿ ಪಿಂಡ ಪ್ರದಾನ ಮಾಡುತ್ತಾರೆ. ಪಿಂಡ ಪ್ರಧಾನ ಮಾಡಿದ ಸ್ಥಳವನ್ನು ಪ್ರೇತ ಪವ೯ತ ಎನ್ನಲಾಗುತ್ತಿದ್ದು, ಕಾಲ ಕ್ರಮೇಣ ರಾಮ ಪಿಂಡ ಪ್ರದಾನ ಮಾಡಿದ ರಾಮಕ್ಷೇತ್ರ ಎಂಬ ಖ್ಯಾತಿಗೆ ಒಳಗಾಗಿದೆ.
ಬಿಳಿಗಿರಿ ಬನವೇ ಗಜಾರಣ್ಯ, ಚಂಪಕಾರಣ್ಯ: ಪುರಾಣಗಳಲ್ಲಿ ಮತ್ತು ರಾಮಾಯಣದಲ್ಲಿ ಉಲ್ಲೇಖವಾಗುವ ಗಜಾರಣ್ಯ ಮತ್ತು ಚಂಪಕಾರಣ್ಯ ಎಂಬುದು ಬಿಳಿಗಿರಿರಂಗನಾಥ ಅರಣ್ಯ ಪ್ರದೇಶ ಎನ್ನಲಾಗಿದ್ದು, ಸೀತೆಯನ್ನು ಅರಸುತ್ತ ಶ್ರೀರಾಮ, ಲಕ್ಷಣರು ಈ ಅರಣ್ಯದ ಮೂಲಕವೇ ಹಾದುಹೋದರು ಎಂಬ ನಂಬಿಕೆ ಇದೆ. ದೊಡ್ಡಸಂಪಿಗೆ ಮರದ ಬಳಿ ಹರಿಯುವ ಭಾರ್ಗವಿ ನದಿಯೂ ಕೂಡ ಪವಿತ್ರ ಜಲ ಎಂಬ ಭಾವನೆ ಇದೆ.
ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಮೂರು ದಿನ ಮಾಂಸ ಮಾರಾಟ ನಿಷೇಧಿಸಿ ಗ್ರಾಪಂ ಆದೇಶ