ಬೆಂಗಳೂರು: ವೈದ್ಯಕೀಯ ಸೇವೆಯಲ್ಲಿ ಬದ್ಧತೆ ಹಾಗೂ ನೈತಿಕತೆ ಇಂದಿನ ಅಗತ್ಯವಾಗಿದೆ. ಆದರೆ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸುಧಾ ಮೂರ್ತಿ ಹೇಳಿದರು.
ನಗರದ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಎನ್‌ಯು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಆಸ್ಪತ್ರೆ ನಡೆಸುವುದು ಸುಲಭದ ಕೆಲಸವಲ್ಲ. ನಾನು ಈ ಕಷ್ಟವನ್ನ ಹತ್ತಿರದಿಂದ ಕಂಡಿದ್ದೇನೆ. ಇಂತಹ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಆಸ್ಪತ್ರೆ 25 ವರ್ಷಗಳನ್ನು ಪೂರ್ಣಗೊಳಿಸುವುದು ಸಾಹಸವೇ ಸರಿ. ಆ ನಿಟ್ಟಿನಲ್ಲಿ ಎನ್‌ಯು ಆಸ್ಪತ್ರೆಯ ಈ ಪಯಣ ನಿಜಕ್ಕೂ ಅಭಿನಂದನಾರ್ಹವಾಗಿದೆ. ಇಂದು ಸಂಪೂರ್ಣ ಉಚಿತ ಚಿಕಿತ್ಸೆ ನೀಡಿ ಆಸ್ಪತ್ರೆ ನಡೆಸುವುದು ಅಸಾಧ್ಯದ ಮಾತಾಗಿದೆ. ಹಾಗೆಯೇ ಕೇವಲ ಹಣ ಮಾಡುವುದಕ್ಕಷ್ಟೇ ಆಸ್ಪತ್ರೆ ನಡೆಸುವುದು ಸರಿಯಾದ ಪ್ರಕ್ರಿಯಲ್ಲ. ಆದರೆ ಎನ್‌ಯು ಅಸ್ಪತ್ರೆ ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ನೀಡುವ ಕೆಲಸ ನಿಜಕ್ಕೂ ಸ್ವಾಗತಾರ್ಹವಾಗಿದೆ. ಅಂಥಹ ಕೆಲಸ ಎನ್‌ಯು ಆಸ್ಪತ್ರೆ ಮಾಡುತ್ತಾ ಬರುತ್ತಿರುವುದು ಬಹು ದೊಡ್ಡ ಸಾಧನೆ ಎಂದು ಬಣ್ಣಿಸಿದರು.
![SILVER_JUBILEE_CELEBRATIONS](https://etvbharatimages.akamaized.net/etvbharat/prod-images/25-08-2024/kn-bng-07-nu-hospital-silver-jubilee-celebrations-sudhamurthy-7210969_24082024225339_2408f_1724520219_448.jpg)
ರಜತ ಮಹೋತ್ಸವದ ಕುರಿತು ಎನ್‌ಯು ಆಸ್ಪತ್ರೆಯ ಅಧ್ಯಕ್ಷ ಡಾ. ವೆಂಕಟೇಶ್ ಕೃಷ್ಣಮೂರ್ತಿ ಮಾತನಾಡಿ, ನಮ್ಮ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರು ನಿಯಮಿತವಾಗಿ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕಗಳಲ್ಲಿ ಸಂಶೋಧನೆಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಹಾಗೆಯೇ ಈ ಮೂಲಕ ರೋಗಿಗಳಲ್ಲಿನ ಸೋಂಕಿನ ಪ್ರಕರಣಗಳು ಕಡಿಮೆ ಮಾಡುವ ಕೆಲಸಗಳು ನಡೆಯುತ್ತಿವೆ. ರೋಗಿಗಳು ಶೀಘ್ರ ಗುಣಮುಖಗೊಳ್ಳುತ್ತಿದ್ದಾರೆ. ಮತ್ತೆ ರೋಗಕ್ಕೆ ತುತ್ತಾಗುವುದು ಹಾಗೂ ಮರಣ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ಪ್ರಯತ್ನದಲ್ಲಿ ಎನ್‌ಯು ಆಸ್ಪತ್ರೆಯು ಮುಂಚೂಣಿಯಲ್ಲಿದೆ ಹಾಗೂ ಇದೇ ಆಸ್ಪತ್ರೆಯ ಯಶಸ್ಸಿಗೆ ಕಾರಣವಾಗಿದೆ. ಅಲ್ಲದೆ ಆಸ್ಪತ್ರೆಯು ಅತ್ಯಾಧುನಿಕ ಐಸಿಯು ಸೌಲಭ್ಯಗಳು, 24/7 ಡಯಾಲಿಸಿಸ್, ಸುಧಾರಿತ ಪ್ರಯೋಗಾಲಯ ಮತ್ತು ರೇಡಿಯೊ ಡಯಾಗ್ನೋಸಿಸ್ ಸೇವೆಗಳು ಮತ್ತು ಯುರೊಡೈನಾಮಿಕ್ಸ್ ಸೌಲಭ್ಯಗಳನ್ನು ಹೊಂದಿದೆ. ಇದರಿಂದ ಉತ್ತಮ ರೀತಿಯಲ್ಲಿ ಸೇವೆ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಯುರಾಲಜಿಸ್ಟ್ ಮತ್ತು ಎನ್‌ಯು ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಸನ್ನ ವೆಂಕಟೇಶ್ ಮಾತನಾಡಿ, ನಮ್ಮ ಆಸ್ಪತ್ರೆಯು 25 ವರ್ಷಗಳನ್ನು ಪೂರೈಸುತ್ತಿದ್ದು, ತನ್ನ ರಜತ ಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಕಳೆದ ಕಾಲು ಶತಮಾನದಲ್ಲಿ(25 ವರ್ಷ) ಎನ್‌ಯು ಆಸ್ಪತ್ರೆ ಹಲವಾರು ಮೈಲಿಗಲ್ಲುಗಳನ್ನು ತಲುಪಿದೆ. 2018ರಲ್ಲಿ ನಾನ್ ಇನ್ವೇಸಿವ್ ರೋಗಿಗಳ ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಯುಎಸ್ ಮೂಲದ ಮಾಸಿಮೊ ಸಹಯೋಗದೊಂದಿಗೆ ಪೇಷಂಟ್ ಸೇಫ್ಟಿನೆಟ್ ಅನ್ನು ಅಳವಡಿಸಿಕೊಂಡ ಭಾರತದ ಮೊದಲ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯು ಸಿಎಮ್ಆರ್ ವರ್ಸಿಯಸ್ ಸರ್ಜಿಕಲ್ ರೊಬೊಟಿಕ್ ಸಿಸ್ಟಮ್ ಅನ್ನು ಪರಿಚಯಿಸಿದ ಭಾರತದಲ್ಲಿ ಮೊದಲನೆಯ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಈ ವಿಧಾನಗಳ ಚಿಕಿತ್ಸೆಯ ಮೂಲಕ ರೋಗಿಗೆ ಎದುರಾಗಬಹುದಾದಂತಹ ತೊಂದರೆಗಳನ್ನು ತಪ್ಪಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
![SILVER_JUBILEE_CELEBRATIONS](https://etvbharatimages.akamaized.net/etvbharat/prod-images/25-08-2024/kn-bng-07-nu-hospital-silver-jubilee-celebrations-sudhamurthy-7210969_24082024225339_2408f_1724520219_309.jpg)
2015ರಲ್ಲಿ ಎನ್‌ಯು ಆಸ್ಪತ್ರೆಯು ಬೆಂಗಳೂರಿನ ರಾಜಾಜಿನಗರದಲ್ಲಿ ಎರಡನೇ ಅತ್ಯಾಧುನಿಕ ಘಟಕವನ್ನು ಆರಂಭಿಸುವ ಮೂಲಕ ತನ್ನ ಶಾಖೆಯನ್ನು ವಿಸ್ತರಿಸಿತು. ರಿಪಬ್ಲಿಕ್ ಆಫ್ ಮಾಲ್ಡೀವ್ಸ್‌ನ ಮಾಲೆಯಲ್ಲಿರುವ ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಯುರಾಲಜಿ ರೆನಲ್ ಮತ್ತು ಫಲವತ್ತತೆ ಕೇಂದ್ರವನ್ನು 2016 ರಲ್ಲಿ ತೆರೆಯುವ ಮೂಲಕ ಆಸ್ಪತ್ರೆಯ ವ್ಯಾಪ್ತಿಯು ವಿದೇಶಕ್ಕೆ ವಿಸ್ತರಿಸಿತು. 2020ರಲ್ಲಿ ಕರ್ನಾಟಕದ ಶಿವಮೊಗ್ಗ ಮತ್ತು ತಮಿಳುನಾಡಿನ ಅಂಬೂರಿನಲ್ಲಿ ಆಸ್ಪತ್ರೆಗಳ ಸ್ಥಾಪನೆಯೊಂದಿಗೆ ದಕ್ಷಿಣ ಭಾರತದಲ್ಲಿ ಶಾಖೆಗಳನ್ನು ಮತ್ತಷ್ಟು ವಿಸ್ತರಣೆ ಮಾಡಲಾಯಿತು. ಎಲ್ಲಾ ಎನ್‌ಯು ಆಸ್ಪತ್ರೆಗಳ ಘಟಕಗಳು ಮಾನ್ಯತೆಗಳನ್ನು ಪಡೆದಿವೆ. ಸಂಸ್ಥೆ ನ್ಯಾಷನಲ್ ಬೋರ್ಡ್- ಮಾನ್ಯತೆ ಪಡೆದ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಮುಂದಿನ ಪೀಳಿಗೆಯ ಯುರಾಲಜಿಸ್ಟ್ ಮತ್ತು ನೆಫ್ರಾಲಜಿಸ್ಟ್ ತಜ್ಞರಿಗೆ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಗೆ ದೀರ್ಘ ಹಾಗೂ ವಿಶೇಷ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು.