ಬೆಂಗಳೂರು: ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡ ಮತ ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿ ಮೂಲಗಳೇ ಈ ಬಗ್ಗೆ ಮಾಹಿತಿ ನೀಡಿವೆ. ಎಸ್.ಟಿ.ಸೋಮಶೇಖರ್ ಮತ ಚಲಾವಣೆ ಬಳಿಕ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದೇನೆ. ಏಜೆಂಟ್ಗೆ ತೋರಿಸಿ ಮತ ಹಾಕಿದ್ದೇನೆ ಎಂದು ತಿಳಿಸಿದ್ದರು.
ಆದರೆ, ಇದೀಗ ಎಸ್.ಟಿ.ಸೋಮಶೇಖರ್ ಅಡ್ಡ ಮತ ಹಾಕಿದ್ದಾರೆ ಎಂದು ಬಿಜೆಪಿ ಮೂಲಗಳೇ ಮಾಹಿತಿ ನೀಡುತ್ತಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಇತ್ತ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಚೇರಿಯಲ್ಲಿ ಈ ಸಂಬಂಧ ಚರ್ಚೆ ನಡೆಸಲಾಗುತ್ತಿದೆ. ವಿಪಕ್ಷ ನಾಯಕ ಆರ್.ಅಶೋಕ್, ಸುನೀಲ್ ಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಸಮಾಲೋಚನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆತ್ಮ ಸಾಕ್ಷಿಯಿಂದ ಮತದಾನ ಮಾಡಿದ್ದೇನೆ: ಆತ್ಮ ಸಾಕ್ಷಿಯಿಂದ ಮತ ಹಾಕಿದ್ದೇನೆ. ಯಾರಿಗೆ ತೋರಿಸಬೇಕು ಅವರಿಗೆ ತೋರಿಸಿ ಮತ ಚಲಾಯಿಸಿದ್ದೇನೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು. ಮತ ಚಲಾವಣೆ ಬಳಿಕ ಮಾತನಾಡಿದ ಅವರು, ಯಾರಿಗೆ ಹೇಳಬೇಕು ಅವರಿಗೆ ಹೇಳಿ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ಅವರು, ಅನುದಾನ ನೀಡುವಂತವರಿಗೆ ಆತ್ಮ ಸಾಕ್ಷಿಯಿಂದ ಮತ ಹಾಕುತ್ತೇನೆ. 11 ವರ್ಷದಿಂದ ಎಲ್ಲರಿಗೂ ಮತ ಹಾಕಿದ್ದೇನೆ. ರಾಜ್ಯಸಭೆಗೆ ಆಯ್ಕೆ ಆದವರು ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ. ನೇರಾ ನೇರ ಹೇಳುತ್ತೇನೆ. ಕಳೆದ ಸಲ ನಿರ್ಮಲಾ ಸೀತಾರಾಮನ್ಗೆ ಮತ ಹಾಕಿದ್ದೇನೆ. ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಅಪಾಯಿಟ್ಮೆಂಟ್ ಕೊಡಲೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ನನಗೆ ಯಾರು ಪ್ರಾಮಿಸ್ ಮಾಡ್ತಾರೆ ಅವರಿಗೆ ಮತ ಹಾಕುತ್ತೇನೆ. ನೆಪ ಹೇಳ್ತಿಲ್ಲ, ಐದಾರು ಬಾರಿ ಮತ ಹಾಕಿದ್ದೇನೆ. ವೋಟು ಹಾಕಿಸೋ ಮೊದಲು ಪ್ರಾಮಿಸ್ ಮಾಡ್ತಾರೆ. 5 ಕೋಟಿ ಅನುದಾನ ಬರುತ್ತೆ, ನಮಗೆ ಕೊಡ್ತಾರಾ ಎಂದು ಪ್ರಶ್ನಿಸುವ ಮೂಲಕ ಕಿಡಿ ಕಾರಿದರು. ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಅಂತಾ ಹೇಳಿಲ್ಲ. ಪಕ್ಷ ಏನು ಹೇಳುತ್ತೊ ಅದನ್ನು ಮಾಡಿದ್ದೆ. ಕುಮಾರಸ್ವಾಮಿ ಅವರು ಅವಕಾಶವಾದಿ ಅಲ್ವಾ?. ಇವರನ್ನು ಸಿಎಂ ಮಾಡಲಿಲ್ವಾ, ಸಿಎಂ ಆದ್ಮೇಲೆ ಒಂದು ಆಗುವುದಕ್ಕಿಂತ ಮೊದಲು ಒಂದು ಎಂದು ವಾಗ್ದಾಳಿ ನಡೆಸಿದರು.
ಓದಿ: ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭ: ಬಿಜೆಪಿ - ಮೈತ್ರಿ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದ ಆರ್. ಅಶೋಕ್