ಬೆಂಗಳೂರು: ಸಿಲಿಕಾನ್ ಸಿಟಿಯ ಹಲವೆಡೆ ಶುಕ್ರವಾರ ಮಧ್ಯಾಹ್ನ ಕೆಲಕಾಲ ಗಾಳಿಸಹಿತ ಮಳೆಯಾಯಿತು. ಕೆ.ಆರ್.ಸರ್ಕಲ್, ಕೆ.ಆರ್.ಮಾರ್ಕೆಟ್, ವಸಂತನಗರ, ಮೆಜೆಸ್ಟಿಕ್, ವೈಟ್ ಫೀಲ್ಡ್, ಕಾಡುಗೋಡಿ, ರಾಜಾಜಿನಗರ, ರೇಸ್ ಕೋರ್ಸ್ ರಸ್ತೆ, ಪ್ಯಾಲೇಸ್ ರಸ್ತೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಉದ್ಯಾನನಗರಿಯ ಜನರು ಮಳೆಯಲ್ಲಿ ಸಂಭ್ರಮದಿಂದ ಮಿಂದೆದ್ದರು. ವಾಹನ ಸವಾರರು ಕೂಡ ನೆನೆದುಕೊಂಡೇ ಸಾಗಿದರು. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಕೆಲಕಾಲ ಟ್ರಾಫಿಕ್ ಜಾಮ್ ಸಹ ಉಂಟಾಯಿತು.
ರಾಜ್ಯದಲ್ಲಿ ಮಳೆ ಮುನ್ಸೂಚನೆ: ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರು ನಗರದಲ್ಲಿ 17.2 ಮಿಲಿ ಮೀಟರ್ ಮಳೆ ಸುರಿದಿದೆ. ಈ ಸಮಯದಲ್ಲಿ 23.4 ಡಿಗ್ರಿ ತಾಪಮಾನ ದಾಖಲಾಗಿದೆ. ಅಲ್ಲದೆ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಕೂಡ ಮಳೆ ಸುರಿದಿದೆ. ಮುಂದಿನ 3 ಗಂಟೆಗಳಲ್ಲಿ ಮತ್ತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
-
#WATCH | Karnataka: Rain lashes parts of Bengaluru city.
— ANI (@ANI) May 3, 2024
(Visuals from Vidhana Soudha area) pic.twitter.com/wgOFIqhsY4
ಉಳಿದಂತೆ ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣ ಮುಂದಿನ ನಾಲ್ಕು ದಿನ ಇರಲಿದೆ. ಮೇ 7ರಿಂದ ಮೂರು ದಿನಗಳ ಕಾಲ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆ ಆಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಹಗುರದಿಂದ ಸಾಧಾರಣ ಗುಡುಗುಸಹಿತ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 38 ಡಿಗ್ರಿ ಮತ್ತು 26 ಡಿಗ್ರಿ ಇರುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ. ಎನ್.ಪುವಿಯರಸನ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಮಳೆ ಸಿಂಚನ: ಬಿಸಿಲಿಂದ ಕಂಗೆಟ್ಟ ಜನರಿಗೆ ತಂಪೆರೆದ ವರುಣ - Rain In Bengaluru