ಹಾಸನ: ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಪುನರ್ವಸು ಮತ್ತು ಪುಷ್ಯ ಮಳೆಗೆ ನಲುಗಿದ್ದ ಹಾಸನದಲ್ಲೀಗ, ಆಶ್ಲೇಷ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಮೂರನೇ ಬಾರಿಗೆ ಗುಡ್ಡ ಕುಸಿತಗೊಂಡು ಬೆಂಗಳೂರು - ಮಂಗಳೂರು ನಡುವಿನ ರೈಲ್ವೆ ಸಂಚಾರ ಕಡಿತಗೊಂಡಿದೆ. ಹೀಗಾಗಿ, ಪ್ರಯಾಣಿಕರು ಅಹೋರಾತ್ರಿ ರೈಲಿನಲ್ಲಿಯೇ ಕಾಲ ಕಳೆಯುವಂತಾಯಿತು.
ಹಾಸನ - ಮಂಗಳೂರು ಮಾರ್ಗದಲ್ಲಿನ ಆಲೂರು ಮತ್ತು ಸಕಲೇಶಪುರ ನಡುವಿನ ಬಾಳ್ಳುಪೇಟೆ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತಗೊಂಡಿದೆ. ಮರಗಳ ಸಮೇತವಾಗಿ ಹಳಿಯ ಮೇಲೆ ಮಣ್ಣು ಕುಸಿದು ಬಿದ್ದಿದೆ. ಘಟನೆಯಿಂದ ಬೆಂಗಳೂರು - ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಬೆಂಗಳೂರು - ಕಣ್ಣೂರು, ಬೆಂಗಳೂರು - ಮುರುಡೇಶ್ವರ ಮತ್ತು ಹಾಸನ - ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವನ್ನೂ ಬಂದ್ ಮಾಡಲಾಗಿದೆ. ಆಲೂರು - ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ.
Breakfast and Drinking water facilities were arranged for https://t.co/XjA5bohCG7 16511 Kannur express passengers at Alur station.#PassengersSafety #AlurRailwayStation pic.twitter.com/JKj8LcN7yD
— DRM Mysuru (@DrmMys) August 10, 2024
ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ 6 ಕಡೆ ರೈಲುಗಳನ್ನು ನಿಲ್ಲಿಸಲಾಗಿದೆ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಇಡೀ ರಾತ್ರಿ ಪರದಾಡುವಂತಾಗಿದೆ. ರಾತ್ರಿ ವೇಳೆ ಸಂಚಾರ ನಡೆಸುವ ರೈಲುಗಳನ್ನು ಸಕಲೇಶಪುರ, ಯಡಕುಮಾರಿ, ಶಿರವಾಗಲು, ಆಲೂರು ಸೇರಿ 6 ರೈಲ್ವೆ ನಿಲ್ದಾಣಗಳಲ್ಲಿಯೇ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.
ಬಳಿಕ ಪ್ರಯಾಣಿಕರು ರೈಲ್ವೆಯಿಂದ ಇಳಿದು, ಬಸ್ ನಿಲ್ದಾಣಕ್ಕೆ ತೆರಳಿ ತಾವು ತಲುಪಬೇಕಾದ ಸ್ಥಳಕ್ಕೆ ಹೋಗಿದ್ದಾರೆ. ರೈಲ್ವೆಯಿಂದ ಪ್ರಯಾಣಿಕರಿಗಾಗಿ ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿ ರೈಲ್ವೆ ಇಲಾಖೆಯಿಂದ ಹಿಟಾಚಿ ಬಳಸಿಕೊಂಡು ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಸಕಲೇಶಪುರದಲ್ಲಿ ಭೂಕುಸಿತದಿಂದ ರೈಲು ಮಾರ್ಗ ಹಾನಿಗೊಳಗಾಗಿದ್ದರಿಂದ ಸಂಚಾರ ಬಂದ್ ಆಗಿತ್ತು. ದುರಸ್ತಿಗೊಳಿಸಿದ ನಂತರ ಮಂಗಳೂರು-ಬೆಂಗಳೂರು ರೈಲು ಸಂಚಾರ ಆಗಸ್ಟ್ 8 ರಿಂದ ಪುನರಾರಂಭಗೊಂಡಿತ್ತು. ಜುಲೈ 26ರ ಸಂಜೆ ಧಾರಾಕಾರ ಮಳೆಯಿಂದಾಗಿ ಸೇತುವೆಯೊಂದರ ಬಳಿ ಭೂ ಕುಸಿತವಾಗಿತ್ತು. ಎಸ್‌ಡಬ್ಲ್ಯೂಆರ್‌ನ ಮೈಸೂರು ವಿಭಾಗದ ಸಿಬ್ಬಂದಿ ಬೆಂಗಳೂರು - ಮಂಗಳೂರು ಸೆಕ್ಟರ್‌ನಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ನಡೆಸಿದ್ದರು. 10 ದಿನಗಳ ಕಾಲ ರೈಲ್ವೆ ಇಲಾಖೆಯು ಈ ದುರಸ್ತಿ ಕಾರ್ಯ ಕೈಗೊಂಡಿತ್ತು. ಇದೀಗ ಮತ್ತೊಂದೆಡೆ ಭೂ ಕುಸಿತಗೊಂಡಿದೆ.
ಇದನ್ನೂ ಓದಿ: ಬೊಲೆರೋ ಪಿಕ್ಅಪ್ - ಕಾರು ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು - Bolero pickup car accident