ರಾಯಚೂರು: ನಗರಸಭೆ ವ್ಯಾಪ್ತಿಗೆ ಬರುವ ಮಹಿಳಾ ಸಮಾಜದ ಮಳಿಗೆಗಳನ್ನು ವ್ಯಾಪಾರಸ್ಥರು ಈವರೆಗೆ ಖಾಲಿ ಮಾಡದಿದ್ದರಿಂದ ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ಇಂದು ಮಳಿಗೆಗಳಿಗೆ ಬೀಗ ಜಡಿದು ವಶಕ್ಕೆ ಪಡೆಯಲು ಮುಂದಾಗಿದ್ದರು. ಇದು ಕೆಲ ಕಾಲ ನಗರಸಭೆ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಈ ವೇಳೆ ವ್ಯಕ್ತಿಯೊಬ್ಬನು ಅಧಿಕಾರಿಗಳಿಗೆ ಮಚ್ಚು ತೋರಿಸಿ ಜೀವ ಬೆದಕರಿಕೆ ಹಾಕಿದ್ದು ಆತಂಕ ಸೃಷ್ಟಿಸಿತು.
ಟೆಂಡರ್ ಅವಧಿ ಮುಗಿದಿದ್ದರಿಂದ ಬಾಕಿಯಿರುವ ಬಾಡಿಗೆ ಹಣ ಪಾವತಿಸಿ ಮಳಿಗೆಗಳನ್ನು ಖಾಲಿ ಮಾಡಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ನಗರಸಭೆ ಪೌರಾಯುಕ್ತರು ಸೆಪ್ಟೆಂಬರ್ 2023ರಲ್ಲಿ ಮಳಿಗೆಗಳ ಬಾಡಿಗೆದಾರರಿಗೆ ನೋಟಿಸ್ ನೀಡಿದ್ದರು. ಅಲ್ಲಿಂದ ಇಲ್ಲಿಯವರಗೆ ಬಾಡಿಗೆಯನ್ನೂ ಪಾವತಿಸದೇ, ಮಳಿಗೆಗಳನ್ನು ಖಾಲಿಯೂ ಮಾಡದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ನಗರಸಭೆ ಸಿಬ್ಬಂದಿ ಇಂದು ಬೆಳಗ್ಗೆ ಮಳಿಗೆ ಖಾಲಿ ಮಾಡಿಸಲು ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಗರಸಭೆ ಸಿಬ್ಬಂದಿ 65 ಮಳಿಗೆಗಳಿಗೆ ಬೀಗ ಜಡಿದು ವಶಕ್ಕೆ ಪಡೆದರು. ವ್ಯಾಪಾರಸ್ಥರು ತೆರವಿಗೆ ಅವಧಿ ಕೇಳಿದ್ದರಿಂದ, 10 ದಿನದೊಳಗೆ ಮಳಿಗೆಗಳನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ತಮ್ಮ ವಶಕ್ಕೆ ಪಡೆಯುವುದಾಗಿ ವ್ಯಾಪಾರಸ್ಥರಿಂದ ಮುಚ್ಚಳಿಕೆ ಪತ್ರ ಬರೆದುಕೊಂಡು ತೆರಳಿದರು.
ನಗರಸಭೆ ಪೌರಾಯುಕ್ತ ಏನ್ ಹೇಳ್ತಾರೆ? ರಾಯಚೂರು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಮಾಧ್ಯಮದವರ ಜೊತೆ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಬರುವ ಮಳಿಗೆಗಳ ಹರಾಜು ಪ್ರಕ್ರಿಯೆ ಹಿನ್ನೆಲೆ ಸೆಪ್ಟೆಂಬರ್ನಲ್ಲಿ ಬಾಕಿ ಬಾಡಿಗೆ ಪಾವತಿಸಿ ಮಳಿಗೆ ಖಾಲಿ ಮಾಡಿ ನಮ್ಮ ನಗರಸಭೆ ವಶಕ್ಕೆ ನೀಡಬೇಕೆಂದು ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗಿತ್ತು. ನಗರಸಭೆಯಿಂದ ಮಳಿಗೆ ವ್ಯಾಪಾರಸ್ಥರಿಗೆ ನೋಟಿಸ್ ನೀಡಿ 5 ತಿಂಗಳು ಕಳೆದಿವೆ. ಆದರೂ ವ್ಯಾಪಾರಸ್ಥರು ಮಳಿಗೆಗಳನ್ನು ತೆರವು ಮಾಡಿಲ್ಲ. ಇಂದು ನಗರಸಭೆ ಮಳಿಗೆಗಳಿಗೆ ಬೀಗ ಜಡಿದು ಸೀಜ್ ಮಾಡಲಾಗಿದೆ. ವ್ಯಾಪಾರಸ್ಥರು ಹತ್ತು ದಿನಗಳವರೆಗೆ ಅವಧಿ ನೀಡಬೇಕೆಂದು ಕೋರಿದ್ದಾರೆ. ಅವರ ಕೋರಿಕೆಯಂತೆ ಮುಚ್ಚಳಿಕೆ ಬರೆದು ಕೊಟ್ರೆ ಹತ್ತು ದಿನ ಮಾತ್ರ ಗಡುವು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮಳಿಗೆಗಳನ್ನು ನಗರಸಭೆ ಸುಪರ್ದಿಗೆ ತೆಗೆದುಕೊಳ್ಳಲಾಗುವುದು.
ಈಗಾಗಲೇ ಫೆ.25ರಿಂದ ಮಳಿಗೆಗಳಿಗೆ ಟೆಂಡರ್ ಕರೆದು ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಬಿಡ್ನಲ್ಲಿ ಭಾಗವಹಿಸುವವರಿಗೆ ಮಳಿಗೆಗಳನ್ನು ನೀಡಬೇಕಾಗುತ್ತದೆ. ಈ ವೇಳೆ ನಗರಸಭೆ ಸಿಬ್ಬಂದಿಗೆ ವ್ಯಕ್ತಿಯೊಬ್ಬರು ಮಚ್ಚು ತೋರಿಸಿ ಹೆದರಿಸಿರುವ ಕುರಿತು ವಿಡಿಯೋ ಇದ್ದು, ಅವರ ವಿರುದ್ಧ ಕಾನೂನುತ್ಮಾಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಐಡಿಎಸ್ಎಂಟಿ ಯೋಜನೆಯಡಿ ಮಳಿಗೆ ನಿರ್ಮಾಣ: ವಕೀಲ ಎ.ಆರ್.ತಾರಾನಾಥ ಮಾತನಾಡಿ, ನಗರಸಭೆ ವ್ಯಾಪ್ತಿ ಮಳಿಗೆಗಳನ್ನು ಐಡಿಎಸ್ಎಂಟಿ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಕಮರ್ಷಿಯಲ್ ಉದ್ದೇಶವಿಲ್ಲದೇ ಜನರ ಉಪಜೀವನ ಮಾಡುವುದಕ್ಕೆ ನಗರದಲ್ಲಿ ವಾಸಿಸುವರಿಗೆ ನಗರ ಬೆಳೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಐಡಿಎಸ್ಎಂಟಿ ಯೋಜನೆಯಡಿ ಮಳಿಗೆಗಳನ್ನು ನಿರ್ಮಿಸಲಾಗಿರುತ್ತದೆ.
ಈ ಮಳಿಗೆಗಳಲ್ಲಿ ಬಾಡಿಗೆದಾರರು 25 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಪ್ರತಿ ತಿಂಗಳು ಬಾಡಿಗೆಯನ್ನೂ ಸಹ ಪಾವತಿ ಮಾಡುತ್ತಿದ್ದಾರೆ. ನಗರಸಭೆಯವರು ಸೆಪ್ಟೆಂಬರ್ನಲ್ಲಿ ನೋಟಿಸ್ ನೀಡಿದ್ರೂ, ಬಾಡಿಗೆದಾರರು ಯಾವುದೇ ಬಾಡಿಗೆ ಬಾಕಿ ಉಳಿಸಿಕೊಂಡಿಲ್ಲ. ನಗರಸಭೆ ಸಿಬ್ಬಂದಿ ಇಂದು 65 ಮಳಿಗೆಗಳನ್ನು ಸೀಜ್ ಮಾಡಿತ್ತು. ಬಳಿಕ ಅವುಗಳನ್ನು ತೆರೆವುಗೊಳಿಸಲಾಗಿದೆ. ಹತ್ತು ದಿನಗಳ ಕಾಲಾವಧಿ ನೀಡಿದ್ದು, ಅಷ್ಟರೊಳಗೆ ನಾವು ದಾಖಲೆ ನೀಡುತ್ತೇವೆ. ನೋಟಿಸ್ ನೀಡುವದರಲ್ಲಿಯೂ ನಗರಸಭೆ ತಾರತ್ಯಮ ಮಾಡಿದೆ. ಯಾರಿಗೆ ರಾಜಕೀಯ ಬೆಂಬಲವಿದೆ ಅವರಿಗೆ ನೋಟೀಸ್ ನೀಡಿಲ್ಲ ಎಂದು ವಕೀಲರು ದೂರಿದರು.
ಇದನ್ನೂ ಓದಿ:ಅಧಿಕ ದರ ವಸೂಲಿ ಮಾಡಿದ ಆಸ್ಪತ್ರೆಗೆ 5 ಲಕ್ಷ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ