ಬಳ್ಳಾರಿ: ಇದು ಸಂವಿಧಾನವನ್ನು ರಕ್ಷಣೆ ಮಾಡುವುದಕ್ಕೆ ನಡೆಯುತ್ತಿರುವ ಚುನಾವಣೆ. ಬಿಜೆಪಿಗೆ ಅಧಿಕಾರ ಕೊಟ್ರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳ್ತಿದ್ದಾರೆ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ನಗರದ ಮುನ್ಸಿಪಾಲ್ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವು ನಮಗೆ ರಕ್ಷಣೆ ಮತ್ತು ಅಧಿಕಾರ ಕೊಡುತ್ತದೆ. ಸಂವಿಧಾನ ಜಾರಿಗೆ ಮೊದಲು ದುರ್ಬಲರಿಗೆ ಯಾವುದೇ ಅಧಿಕಾರ ಇರಲಿಲ್ಲ. ಸಂವಿಧಾನದ ತೆಗೆದು ಹಾಕಬಹುದೆಂದು ಬಿಜೆಪಿ ಅವರು ಆಲೋಚನೆ ಮಾಡ್ತಿದ್ದಾರೆ. ಸಂವಿಧಾನ ಬದಲಾಯಿಸುವ ಶಕ್ತಿ ಯಾರಿಗೂ ಇಲ್ಲ. ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ತಂಡ ಸಂವಿಧಾನ ಉಳಿಸುವ ಕೆಲಸ ಮಾಡಿದ್ರೆ, ಬಿಜೆಪಿ ಸಂವಿಧಾನವನ್ನು ಬದಲಾಯಿಸುವ ಕೆಲಸ ಮಾಡ್ತಿದೆ ಎಂದು ಆರೋಪಿಸಿದರು.
''ಅದಾನಿಯಂತ ಜನರಿಗೆ ದೇಶದ ಹಣ ಕೊಡುವ ಕೆಲಸವನ್ನು ಬಿಜೆಪಿ ಮಾಡ್ತಿದೆ. ಬಿಜೆಪಿ ಸಿರಿವಂತರಿಗೆ ಹಣ ಕೊಟ್ಟರೆ, ನಾವು ಬಡವರಿಗೆ ಹಣ ಕೊಡ್ತೇವೆ. ಮೋದಿ 22 ಜನ ಶ್ರೀಮಂತರಿಗೆ ಹಣ ಕೊಟ್ಟರೆ, ನಾವು ದೇಶದ ಜನರಿಗೆ ಹಣ ಕೊಡ್ತೇವೆ. ರಾಜ್ಯ ಸರಕಾರ ಇಡೀ ದೇಶಕ್ಕೆ ದಾರಿ ತೋರಿಸುತ್ತದೆ. ಗೃಹ ಲಕ್ಷ್ಮಿ, ಅನ್ನಭಾಗ್ಯ, ಗೃಹ ಜ್ಯೋತಿ, ಯುವನಿಧಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಭೂಮಿಯ ಮೇಲಿನ ಯಾವ ಸರಕಾರ ಇಂತಹ ಯೋಜನೆ ಮಾಡಿಲ್ಲ'' ಎಂದರು.
ಇಡೀ ದೇಶದ ಬಡ ಜನರ ಮನೆಗಳ ಸರ್ವೆ ಮಾಡ್ತೇವೆ. ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆ ಆಯ್ಕೆ ಮಾಡಿ, ಅವರ ಖಾತೆಗೆ ಒಂದು ಲಕ್ಷ ಹಣ ಹಾಕ್ತೇವೆ. ದೇಶದ ಕೋಟ್ಯಂತರ ಮಹಿಳೆಯರು, ಬಡವರಿಗೆ ನಿರುದ್ಯೋಗಿಗಳನ್ನು ಲಕ್ಷಾಧೀಶರನ್ನಾಗಿ ಮಾಡಲು ಹೊರಟಿದ್ದೇವೆ. ನರೇಂದ್ರ ಮೋದಿ ಕೋವಿಡ್ನಂತೆ ನಿರುದ್ಯೋಗವನ್ನು ತಂದಿದ್ದಾರೆ. ಮೋದಿಯವರು ನಿರುದ್ಯೋಗಿ ಯುವಕರಿಗೆ ರಸ್ತೆಯಲ್ಲಿ ನಿಂತು ಪಕೋಡ ಮಾರುವಂತೆ ಹೇಳ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ನಮ್ಮ ಸರಕಾರ ಹೊಸ ಯೋಜನೆ ತರುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ರು.
ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕೊಡಿಸುತ್ತೇವೆ. ದೇಶದ ಎಲ್ಲ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಅಗ್ನಿವೀರ ಯೋಜನೆಯನ್ನು ನಿಲ್ಲಿಸುತ್ತೇವೆ. ಜಿಎಸ್ ಟಿಯನ್ನು ಬದಲಾಯಿಸುತ್ತೇವೆ. ರೈತರ, ಬಡವರ ಮೇಲಿನ ಜಿಎಸ್ಟಿ ಕಡಿಮೆ ಮಾಡಿ ಸರಳ ಜಿಎಸ್ಟಿ ಮಾಡ್ತೇವೆ. ಭಾರತೀಯ ಚೊಂಬು ಪಾರ್ಟಿ, ನರೇಂದ್ರ ಮೋದಿ ಅವರ ಚೊಂಬು ಪಾರ್ಟಿ, ಖಾಲಿ ಚೊಂಬು ಕೊಟ್ಟಿದ್ದಾರೆ. ಬರ ಪರಿಹಾರಕ್ಕೆ ಕೋಟ್ಯಂತರ ಹಣ ಕೊಡುವುದು ಬಿಟ್ಟು ಖಾಲಿ ಚೊಂಬು ಕೊಟ್ಟಿದ್ದಾರೆ. ಕಾಂಗ್ರೆಸ್ ಪಾರ್ಟಿಗೆ ಶಕ್ತಿ ಕೊಡಿ, ನಾನು ಬಳ್ಳಾರಿ ಜನರನ್ನು ಕೇಳಲು ಬಯಸುತ್ತೇನೆ. ಐದು ಗ್ಯಾರಂಟಿ ಕೊಡುವುದಾಗಿ ಹೇಳಿದ್ದೆ, ಹಾಗೆ ಕೊಟ್ಟಿದ್ದೇನೆ. ನಾನು ಹೇಳಿದಂತೆ ಮಾಡ್ತೇನೆ ಎಂದು ಕಾಂಗ್ರೆಸ್ ನಾಯಕ ಭರವಸೆ ನೀಡಿದರು.