ಹಾಸನ: ಕೇಂದ್ರ ಬಜೆಟ್ ಮಂಡಿಸುವಾಗ ದೇಶವನ್ನು ವಿಶ್ವಗುರು ಮಾಡುವುದು ಹಾಗೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗುರಿಯಿಟ್ಟುಕೊಂಡು ಕರ್ನಾಟಕದ ಜನತೆಗೆ ನರೇಂದ್ರ ಮೋದಿ ಅವರು ಸಿಹಿ ಸುದ್ದಿ ನೀಡಲಿದ್ದಾರೆ. ರಾಜ್ಯಕ್ಕೆ ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಹಣವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಸ್ತೆ, ರೈಲ್ವೆ ಸೇರಿದಂತೆ ಹಲವಾರು ಯೋಜನೆಗಳಿಗೆ ಬಿಡುಗಡೆ ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ನಾನು ಕಂದಾಯ ಸಚಿವನಾಗಿದ್ದಾಗ ಕಾಫಿ ಬೆಳೆಗಾರರಿಗೆ ಭೂಮಿ ಲೀಜ್ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿತ್ತು. ನಾವು 30 ವರ್ಷದ ಅವಧಿಗೆ ಲೀಜ್ಗೆ ನೀಡಿದ್ದೆವು. ಬಿಜೆಪಿ ಕಾಲದಲ್ಲಿ ಯೋಜನೆ ಜಾರಿಯಾಗಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡಿ ಕಾಫಿ ಬೆಳೆಗಾರರಿಗೆ ಅನ್ಯಾಯವಾಗುವ ರೀತಿಯಲ್ಲಿ ವರ್ತಿಸಿದೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಜ್ಞಾನವಾಪಿ ವಿಚಾರ: ಭಾರತ ಯಾವುದೇ ದೇಶದ ಮೇಲೆ ಲೂಟಿ ಮಾಡಿದ ನಿದರ್ಶನವಿಲ್ಲ. ಮುಸ್ಲಿಂ ದಾಳಿಕೋರರು ನಮ್ಮ ದೇವಾಲಯಗಳನ್ನು ಒಡೆದು ಹಾಕಿ ಅದರ ಮೇಲೆ ಮಸೀದಿ ನಿರ್ಮಾಣ ಮಾಡಿರುವ ಸಾವಿರಾರು ಘಟನೆಗಳಿವೆ. ಶ್ರೀರಂಗಪಟ್ಟಣ ಮಸೀದಿ ಕಂಬಗಳ ಮೇಲೆ ನಾಗರ ಕೆತ್ತನೆ ಇದೆ. ನಾಗರ ಕೆತ್ತನೆಗೂ ಮುಸ್ಲಿಮರಿಗೂ ಏನು ಸಂಬಂಧ?, ಜ್ಞಾನವ್ಯಾಪಿ ದೇವಾಲಯ ವಿಚಾರದಲ್ಲಿ ಕೋರ್ಟ್ ಆದೇಶ ಸ್ವಾಗತ. ನಮ್ಮ ಕಾಲದಲ್ಲಿ ಜ್ಞಾನವಾಪಿ ಭವ್ಯ ಮಂದಿರ ನಿರ್ಮಾಣವಾಗಲಿ ಎಂದರು.
ಹನುಮ ಧ್ವಜ ತೆರವು ಪ್ರಕರಣ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಕೇಸರಿ ಧ್ವಜ ತೆರವು ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ರಾಷ್ಟ್ರಧ್ವಜಕ್ಕೆ ಕಾಂಗ್ರೆಸ್ ಅವಮಾನಿಸಿದೆ. ಹನುಮ ಧ್ವಜ ತೆಗೆದು ರಾಷ್ಟ್ರಧ್ವಜ ಹಾಕಲು ಯಾವ ಕಾನೂನಿನ ಪುಸ್ತಕದಲ್ಲಿ ಅವಕಾಶ ಇದೆ. ಹನುಮ ಧ್ವಜ ತೆಗೆಯಲು ರಾಷ್ಟ್ರಧ್ವಜ ಹಾಕಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಂದ್ ನಿರ್ಧಾರಕ್ಕೆ ಬಿಜೆಪಿ ಬೆಂಬಲಿಸಲಿದೆ ಎಂದು ಹೇಳಿದರು.
ಸಿಎಂಗೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಲಿ: ಸಂವಿಧಾನದ ಪ್ರಥಮ ಪ್ರಜೆ, ದಲಿತ ಹೆಣ್ಣು ಮಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವುದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಇದು ಕಾಂಗ್ರೆಸ್ ಸಂಸ್ಕೃತಿ. ಇದೇ ಭರದಲ್ಲಿ ಸಿದ್ದರಾಮಯ್ಯ ಸೋನಿಯಾ ಗಾಂಧಿ ಬಗ್ಗೆ ಹೇಳಿದ್ದರೆ, ಮೂರು ದಿನಗಳಲ್ಲಿ ಅಧಿಕಾರದಿಂದ ಇಳಿಯುತ್ತಿದ್ದರು. ರಾಷ್ಟ್ರಪತಿ ಬಗ್ಗೆ ಹಗುರವಾಗಿ ಮಾತನಾಡಿದ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ನೋಟಿಸ್ ಜಾರಿ ಮಾಡಲಿ ಎಂದು ಆರ್.ಅಶೋಕ್ ಒತ್ತಾಯಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ಗೆ ಕ್ಷಣಗಣನೆ: ಬೆಟ್ಟದಷ್ಟು ನಿರೀಕ್ಷೆಯಲ್ಲಿ ಬೆಳಗಾವಿ ಜನ: ಉದ್ಯಮಿಗಳು ಹೇಳಿದ್ದೇನು..?