ಬೆಂಗಳೂರು : ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಸೋಮವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದರು.
ನಿಲುವಳಿ ಸೂಚನೆಯಡಿ ಪೂರ್ವಭಾವಿ ಪ್ರಸ್ತಾಪ ಮಾಡಿದ ಅಶೋಕ್, ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬೋರ್ವೆಲ್ಗಳಲ್ಲಿ ಬತ್ತಿ ಹೋಗಿದ್ದು, ಅಂತರ್ಜಲ ಕುಸಿದಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿದ ಸಮಸ್ಯೆ ತೀವ್ರವಾಗಿದೆ. ಜಲಕ್ಷಾಮ ಉಂಟಾಗಿದೆ. ಬೇಸಿಗೆಗೂ ಮುನ್ನವೇ ಇಂಥ ಗಂಭೀರ ಪರಿಸ್ಥಿತಿಯನ್ನು ರಾಜ್ಯ ಅನುಭವಿಸುತ್ತಿದೆ.
ಕಳೆದ 30 ವರ್ಷಗಳಿಗೆ ಹೋಲಿಸಿದರೆ ಗರಿಷ್ಠ ತಾಪಮಾನ 2 ಡಿಗ್ರಿಯಷ್ಟು ಹೆಚ್ಚಾಗಿದೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಕೆಆರ್ಎಸ್, ಆಲಮಟ್ಟಿ ಭದ್ರ ಸೇರಿದಂತೆ ಎಲ್ಲಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟಿದೆ. ಇದು ಎಲ್ಲ ಕ್ಷೇತ್ರಗಳ ಶಾಸಕರ ಸಮಸ್ಯೆಯಾಗಿದೆ. ಸರ್ಕಾರ ತಕ್ಷಣ ಈ ವಿಚಾರದಲ್ಲಿ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಲಿಂಗಾಪುರ ಎಂಬ ಗ್ರಾಮದಲ್ಲಿ 1100 ಜನಸಂಖ್ಯೆ ಇದ್ದು, 800 ಮಂದಿ ನೀರಿಲ್ಲದೆ ಗ್ರಾಮ ತೊರೆದು ಗುಳೇ ಹೋಗಿದ್ದಾರೆ. ಗೋವಾ, ಮಂಗಳೂರು ಕಡೆ ಉದ್ಯೋಗ ಹರಸಿ ಗುಳೇ ಹೋಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣವಿದ್ದರೆ ಹೊಸ ಬೋರ್ವೆಲ್ ಕೊರೆಯಲು ಸಾಧ್ಯವಿಲ್ಲ. ಇರುವ ಬೋರ್ವೆಲ್ಗಳನ್ನು ಡ್ರಿಲ್ ಮಾಡಬಹುದು ಅಷ್ಟೇ. ಇನ್ನು ಮುಂದಿನ ನಾಲ್ಕು ತಿಂಗಳು ಕಷ್ಟಕರವಾಗಿದೆ. ಒಂದು 500 ರೂ.ಗಿದ್ದ ಟ್ಯಾಂಕರ್ ನೀರು 3ರಿಂದ 4 ಸಾವಿರ ರೂ.ಗೆ ಹೆಚ್ಚಳವಾಗಿದೆ. ಹೀಗಾಗಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಹೊಸ ಬೋರ್ವೆಲ್ ಕೊರೆಯಲು ಅನುಕೂಲವಾಗುವಂತೆ ಆದೇಶ ಮಾಡಬೇಕು. ಪ್ರತಿ ಗ್ರಾಮ ಪಂಚಾಯ್ತಿಗೆ 10 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕೆಂದು ಆರ್. ಅಶೋಕ್ ಮನವಿ ಮಾಡಿದರು.
ಇದನ್ನು ಬೆಂಬಲಿಸಿದ ಬಿಜೆಪಿಯ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರು, ಇದೊಂದು ಗಂಭೀರವಾದ ವಿಚಾರ. ಜನಜಾನುವರುಗಳಿಗೆ ನೀರಿಲ್ಲದೆ ತೊಂದರೆಯಾಗಿದೆ. ಜೀವನದಿಗಳಾಗಿದ್ದ ತುಂಗಾ ಭದ್ರ ನದಿ ಭತ್ತಿ ಹೋಗಿದ್ದು, ಮಲೆನಾಡಿನಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಳೇ ಹೋಗುವ ಪರಿಸ್ಥಿತಿ ಇದೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕುಡಿಯುವ ನೀರಿನ ವಿಚಾರದ ಚರ್ಚೆಗೆ ತಕರಾರಿಲ್ಲ. ಸಭಾಧ್ಯಕ್ಷರು ಯಾವ ರೂಪದಲ್ಲಿ ಚರ್ಚೆಗೂ ಕೊಟ್ಟರೂ ಸರ್ಕಾರ ಸಿದ್ಧವಿದೆ ಎಂದರು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಈ ವಿಚಾರವನ್ನು ನಿಲುವಳಿ ಸೂಚನೆಗೆ ಬದಲಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.
ಇದನ್ನೂ ಓದಿ : ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳ ಫಲಾನುಭವಿಗಳಿಗೆ ಆರ್ಥಿಕ ನೆರವು: ಜಮೀರ್ ಅಹ್ಮದ್