ಬೆಂಗಳೂರು: ನನ್ನನ್ನು ಭೂ ಕಬಳಿಕೆದಾರ ಎಂದು ಕರೆದಿರುವ ಕಾಂಗ್ರೆಸ್‌ನ ನಾಲ್ಕು ಸಚಿವರು, ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಆದರೆ, ಇದೇ ಕಾಂಗ್ರೆಸ್‌ನ ಕೇಂದ್ರ ಸರ್ಕಾರ ಅಂದು ನೇಮಿಸಿದ್ದ ರಾಜ್ಯಪಾಲರು ಮತ್ತು ಘನ ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೂ, ಕಾಂಗ್ರೆಸ್ ಪಕ್ಷ ನ್ಯಾಯಾಲಯಕ್ಕಿಂತ ದೊಡ್ಡದಾಗಲು ಯತ್ನಿಸಿ ತೀರ್ಪು ನೀಡಲು ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ತಮ್ಮ ಮೇಲಿನ ಆರೋಪಗಳ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನಾಲ್ವರು ಸಚಿವರು ನನ್ನ ಬಗ್ಗೆ ಕಳಂಕ ಸೃಷ್ಟಿಸಲು ಹಳೆಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ ಎಂದರು.
ಈ ಪ್ರಕರಣದ ಬಗ್ಗೆ ಆರೋಪ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್‌ನ ಕೇಂದ್ರ ಸರ್ಕಾರವೇ ನೇಮಿಸಿದ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಇದ್ದರು. ಅವರೂ ಕೂಡ ಈ ಪ್ರಕರಣವನ್ನು ತನಿಖೆಗೆ ವಹಿಸಿಲ್ಲ. ಅಷ್ಟೇ ಅಲ್ಲದೆ ನ್ಯಾಯಾಲಯ ಕೂಡ ಇದರ ವಿರುದ್ಧ ತನಿಖೆ ಮಾಡಿಸಲು ಮುಂದಾಗಲಿಲ್ಲ. ರಾಜ್ಯಪಾಲರು ಹಾಗೂ ನ್ಯಾಯಾಲಯವೇ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟರೆ, ಕಾಂಗ್ರೆಸ್ ಪಕ್ಷ ಮಾತ್ರ ಇದರಲ್ಲಿ ತೀರ್ಪು ನೀಡಲು ಮುಂದಾಗಿದೆ. ಅಂದರೆ ಕಾಂಗ್ರೆಸ್ ಪಕ್ಷ ತನ್ನನ್ನು 'ನ್ಯಾಯಾಲಯಕ್ಕಿಂತ ದೊಡ್ಡದು' ಎಂದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ನಾನು ಆರೋಪಮುಕ್ತ, ಸಿದ್ದರಾಮಯ್ಯ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣ ತನಿಖೆಯಾಗಬೇಕಾದ ಪ್ರಕರಣ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತೀರ್ಪು ಬಂದ ಬಳಿಕ ಮುಖ್ಯಮಂತ್ರಿಯವರು ಭಯಗೊಂಡು ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನಾನು ಕೋರ್ಟ್ ಆದೇಶ ಬರುವ ಮುನ್ನವೇ ನಿವೇಶನ ಹಿಂದಿರುಗಿಸಿದ್ದೆ. ಕೋರ್ಟ್‌ನಲ್ಲಿ ನಾನು ಆಪಾದಿತ ಎಂದು ಹೇಳಿರಲಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೂಡ ನನ್ನನ್ನು 'ಆರೋಪ ಮುಕ್ತ' ಮಾಡಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತವಾಗಿಲ್ಲ. ಈ ದೇಶದಲ್ಲಿ ಕೋರ್ಟ್ ದೊಡ್ಡದೋ, ಕಾಂಗ್ರೆಸ್ ದೊಡ್ಡದೋ ಎಂದು ಪ್ರಶ್ನೆ ಮಾಡಿದರು.
ಬೇನಾಮಿ ಹೇಗಾಗುತ್ತದೆ?: ಕಾಂಗ್ರೆಸ್ ಪಕ್ಷ ಕೋರ್ಟ್‌ಗಿಂತ ದೊಡ್ಡದಲ್ಲ. ಗೌರವಾನ್ವಿತ ಸಚಿವರಾದ ಕೃಷ್ಣ ಬೈರೇಗೌಡರ ಕೋಲಾರದ ಆಸ್ತಿಗಳೆಲ್ಲವೂ ಕುಟುಂಬದಿಂದ ಅವರಿಗೆ ಬಂದಿದೆ. ಅದೇ ರೀತಿ ಮುನಿವೆಂಕಟಪ್ಪ ಅವರು ವಿಲ್ ತಯಾರಿಸಿ ಅವರ ಮಕ್ಕಳಿಗೆ ಆಸ್ತಿ ಕೊಟ್ಟಿದ್ದಾರೆ. ಆ ಕುಟುಂಬದಲ್ಲಿ ಸುಮಾರು 20 ಜನರಿದ್ದು, ನನ್ನ ಹೆಸರಿಗೆ ನೋಂದಣಿಯಾದಾಗ ಆ 20 ಜನರು ಕೂಡ ಸಹಿ ಹಾಕಿದ್ದಾರೆ. ಇದು ಹೇಗೆ ಬೇನಾಮಿಯಾಗುತ್ತದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಈ ಹಿಂದೆ ಬಿಡಿಎ ಜಾಗ ಮರಳಿಸಿದ್ದರು, ರಾಜೀನಾಮೆ ಕೊಡ್ತಾರಾ: ಸಚಿವರುಗಳ ಸವಾಲು - MUDA Case