ಕಾರವಾರ: ಕಾರವಾರದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕಿ ನಡುವಿನ ವಾಕ್ಸಮರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರವಾರ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ವೇಳೆ ಮಾಡಿದ್ದ ಆರೋಪ ಸಂಬಂಧ ಮಾಜಿ ಶಾಸಕಿ ವಿರುದ್ಧ ಶಾಸಕ ದೂರು ನೀಡಿದ್ದು, ಇದೀಗ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಬುಧವಾರ ಕಾರವಾರ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಸತೀಶ್ ಸೈಲ್ಗೆ ಹಾಗೂ ಮಾಜಿ ಶಾಸಕಿ ಬಿಜೆಪಿಯ ರೂಪಾಲಿ ನಾಯ್ಕಗೆ ಪ್ರತಿಷ್ಠೆಯಾಗಿತ್ತು. ಎರಡು ಪಕ್ಷ ಸಮಬಲ ಸಾಧಿಸಿದ್ದು ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರು ನಿರ್ಣಾಯಕರಾಗಿದ್ದರು. ಆದರೆ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ ಅಧ್ಯಕ್ಷ ಗಾದಿಗೆ ಏರಿತ್ತು. ಇದೇ ವೇಳೆ ರೂಪಾಲಿ ನಾಯ್ಕ ಹಾಗೂ ಸತೀಸ ಸೈಲ್ ನಡುವೆ ವಾಕ್ಸಮರ ನಡೆದಿತ್ತು.
ಈ ವೇಳೆ ರೂಪಾಲಿ ನಾಯ್ಕ ಅವರು ಶಾಸಕ ಸತೀಶ್ ಸೈಲ್ ಕಾರ್ಯಕರ್ತನನ್ನು ಬಲಿ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದರು. ಈ ಹೇಳಿಕೆ ಬಗ್ಗೆ ಸಿಟ್ಟಿಗೆದ್ದ ಸತೀಶ್ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರು ಬುಧವಾರ ಎನ್ಸಿ ಪ್ರಕರಣ ದಾಖಲಿಸಿದ್ದು, ಗುರುವಾರ ನ್ಯಾಯಾಲಯದ ಅನುಮತಿಯೊಂದಿಗೆ ಎಫ್ಐಆರ್ ದಾಖಲಿಸಿದ್ದಾರೆ.
"ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮೀನುಗಾರ ಮುಖಂಡ ರಾಜು ತಾಂಡೇಲ ಎಂಬುವವರು ನಗರಸಭೆ ಚುನಾವಣೆ ಸಂಬಂಧ ಗೋವಾದ ರೆಸಾರ್ಟ್ನಲ್ಲಿ ನಡೆದ ಸಭೆ ಮುಗಿಸಿ ಬರುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ಈ ವೇಳೆ ಶಾಸಕ ಸತೀಶ್ ಸೈಲ್ ಅವರೇ ರಾಜು ತಾಂಡೇಲ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವಿಚಾರದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ" ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇನ್ನು ಈ ಬಗ್ಗೆ ಮಾಜಿ ಶಾಸಕಿ ಬಳಿ ಕೇಳಿದರೆ "ನಾನು ಯಾರ ಸಾವಿನ ಹೆಸರನ್ನೂ ಉಲ್ಲೇಖ ಮಾಡಿ ಹೇಳಿಕೆ ನೀಡಿಲ್ಲ. ಶಾಸಕ ಸೈಲ್ ಆರೋಪವನ್ನು ಮೈಮೇಲೆ ಹಾಕಿಕೊಳ್ಳುತ್ತಿದ್ದು, ನನ್ನನ್ನು ತುಳಿಯುವ ಪ್ರಯತ್ನ ಇದು" ಎಂದು ಕಿಡಿಕಾರಿದ್ದಾರೆ.