ಬೆಂಗಳೂರು: 2024ರ ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29 ರಿಂದ ಆರಂಭಗೊಳ್ಳಲಿದ್ದು, ಮೇ 16ರವರೆಗೆ ನಡೆಯಲಿದೆ. ಈ ಪರೀಕ್ಷೆಗೆ ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಮಂಡಳಿಯ ವೆಬ್ಸೈಟ್ https://kseab.karnatala.gov.in ನಲ್ಲಿ ಪಡೆಯಬಹುದಾಗಿದೆ.
ಹನ್ನೊಂದು ಅಂಕಿಗಳನ್ನೊಳಗೊಂಡ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪತ್ರವನ್ನು ಆನ್ಲೈನ್ನಲ್ಲಿ ಪಡೆಯಬಹುದಾಗಿದೆ. ಇನ್ನುಳಿದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪ್ರವೇಶ ಪತ್ರ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಒಟ್ಟು 1,49,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 32,848 ವಿದ್ಯಾರ್ಥಿಗಳು ಫಲಿತಾಂಶವನ್ನು ಉನ್ನತೀಕರಿಸಿಕೊಳ್ಳಲು ಪರೀಕ್ಷೆ ತೆಗೆದುಕೊಂಡಿದ್ದು, 27,092 ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ, ನಾಟ್ ಕ್ಲಿಯರ್ಡ್ ವಿದ್ಯಾರ್ಥಿಗಳ ಸಂಖ್ಯೆ 89,221 ಆಗಿದ್ದು, 139 ವಿದ್ಯಾರ್ಥಿಗಳು ಶೇ.75 ರಷ್ಟು ಹಾಜರಾತಿ ಇಲ್ಲದೇ 17 ವರ್ಷ ತುಂಬಿದ ಖಾಸಗಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ.
ಒಟ್ಟು 84,933 ವಿದ್ಯಾರ್ಥಿಗಳು, 64,367 ವಿದ್ಯಾರ್ಥಿನಿಯರು ಸೇರಿ 1,49,300 ಅಭ್ಯರ್ಥಿಗಳು ಪರೀಕ್ಷೆ 2ಕ್ಕೆ ಹಾಜರಾಗುತ್ತಿದ್ದು, ಕಲಾ ವಿಭಾಗದಲ್ಲಿ 52,492, ವಾಣಿಜ್ಯ ವಿಭಾಗದಲ್ಲಿ 39,427 ಮತ್ತು ವಿಜ್ಞಾನ ವಿಭಾಗದಲ್ಲಿ 57,381 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಸಿಇಟಿಗೆ ಶೇ.92ರಷ್ಟು ಹಾಜರಾತಿ: ಪ್ರಶ್ನೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏ.27 ರವರೆಗೆ ಕಾಲಾವಕಾಶ - CET Exam