ಮಂಗಳೂರು: ಉಳಾಯಿಬೆಟ್ಟು ಕಾಯರ್‌ಪದವಿನಲ್ಲಿ ಜೂ. 21ರಂದು ರಾತ್ರಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಒಟ್ಟು ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಕೇರಳದ ತ್ರಿಶೂರ್ ನಿವಾಸಿಗಳಾದ ಡೆವಿನ್, ಗಾಡ್ವಿನ್, ಅಮಲ್‌ಕೃಷ್ಣ ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಈಗಾಗಲೇ ಉಪ್ಪಳದ ಬಾಲಕೃಷ್ಣ ಶೆಟ್ಟಿ, ಪೆರುವಾಯಿ ರೇಮಂಡ್ ಡಿಸೋಜ, ನೀರುಮಾರ್ಗ ನಿವಾಸಿಗಳಾದ ರಮೇಶ್, ವಸಂತ್ ಕುಮಾರ್, ತಿರುವನಂತಪುರದ ಜಾನ್‌ಬಾಸ್ಕೋ, ತ್ರಿಶೂರ್‌ನ ಶಿಜೋ ದೇವಸಿ, ಸತೀಶ್ ಬಾಬು, ಶಾಕೀರ್ ಹುಸೇನ್, ಸಜೀಶ್ ಎಂ., ವಿನೋಜ್ ಪಿ.ಕೆ., ಕಾರು ಚಾಲಕ ಬಿಪಿನ್ ರಾಜ್‌ನನ್ನು ಬಂಧಿಸಲಾಗಿತ್ತು.
ಚಿನ್ನಾಭರಣ, ನಗದು ವಶ: ಕೇರಳ ತ್ರಿಶೂರ್‌ನಿಂದ ಬಂಧಿಸಲಾದ ಮೂವರು ಆರೋಪಿಗಳಿಂದ ಕೆಲವು ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಮೂವರು ಆರೋಪಿಗಳ ಬಂಧನ ಬಾಕಿ ಇದೆ. ದರೋಡೆಕೋರರು ಮನೆಯವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು.
300 ಕೋಟಿ ದರೋಡೆಗೆ 7 ತಿಂಗಳಿಂದ ಸ್ಕೆಚ್: ದರೋಡೆಗೊಳಗಾದ ಉದ್ಯಮಿಯೊಂದಿಗೆ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ವಸಂತ ಕುಮಾರ್ ಉದ್ಯಮಿಯ ವ್ಯವಹಾರ ಹಾಗೂ ಮನೆಯ ಮಾಹಿತಿಯನ್ನು ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದನು. ಈತ ಹಾಗೂ ರೇಮಂಡ್ ಡಿಸೋಜ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಮಾಹಿತಿ ನೀಡಿದ್ದು, ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆಗೆ ಸಂಚು ರೂಪಿಸಿದ್ದನು. ಅದರಂತೆ ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ಈ ದರೋಡೆ ಕೃತ್ಯ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಸಂತ ಕುಮಾರ್ ಆರೋಪಿ ರಮೇಶ್ ಪೂಜಾರಿಗೆ ಉದ್ಯಮಿಯ ಬಳಿ ಕೋಟ್ಯಂತರ ಹಣ ಇದ್ದು, ಅದನ್ನು ಬಚ್ಚಿಟ್ಟಿದ್ದ ಸ್ಥಳದ ಬಗ್ಗೆ ತಿಳಿಸಿದ್ದ. ಆತ ಕೇರಳದ ಆರೋಪಿಗಳಿಗೆ ಮಾಹಿತಿ ನೀಡುವಾಗ ಸುಮಾರು 300 ಕೋಟಿ ರೂ. ಹಣ ಇದೆ ಎಂದು ತಿಳಿಸಿದ್ದಾನೆ. ಹೀಗೆ 300 ಕೋಟಿ ಹಣವನ್ನು ದರೋಡೆ ಮಾಡಲು ಏಳು ತಿಂಗಳಿಂದ ಸ್ಕೆಚ್ ಹಾಕಲಾಗಿತ್ತು. ದರೋಡೆ ಮಾಡಿದ ಹಣವನ್ನು ಕೊಂಡೊಯ್ಯೊಲು ಆರೋಪಿಗಳು ಏಳೆಂಟು ಗೋಣಿಚೀಲಗಳನ್ನು ತಂದಿದ್ದರು ಪೊಲೀಸರು ಪ್ರಕರಣದ ಕುರಿತು ವಿವರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಕದ್ದು ರೈಲಿನಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳರು: ತುರ್ತು ಕಾರ್ಯಾಚರಣೆ ನಡೆಸಿ ಹಿಡಿದ ಪೊಲೀಸ್ರು! - Robbery Case