ಬೆಂಗಳೂರು: ನಿವೇಶನದ ಮಾರ್ಗಸೂಚಿ ದರ ಆಧಾರಿತ ಆಸ್ತಿ ತೆರಿಗೆ ನಿಗದಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ನಿವೇಶನ, ಕಟ್ಟಡ, ವಾಣಿಜ್ಯ ಹಾಗೂ ಇತರೆ ಬಳಕೆಗೆ ಆಸ್ತಿ ತೆರಿಗೆ ಪ್ರಮಾಣವನ್ನು ನಿಗದಿ ಮಾಡಿ, ಹೊಸ ಕರಡು ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.
ವಸತಿ ನಿವೇಶನ, ಭೂಮಿ ಮತ್ತು ವಸತಿ ಖಾಲಿ ಪ್ರದೇಶಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಅಪಾರ್ಟ್ ಮೆಂಟ್, ಫ್ಲ್ಯಾಂಟ್ ಸೇರಿದಂತೆ ಭೂಮಿ, ನಿವೇಶನಗಳನ್ನು ಬಾಡಿಗೆಗೆ ನೀಡಿದ್ದರೆ, ವರ್ಷಕ್ಕೆ ಪ್ರತಿ ಅಡಿಗೆ ಕರ್ನಾಟಕ ಸ್ಟ್ಯಾಂಪ್ ಕಾಯ್ದೆಯಲ್ಲಿ ನಮೂದಾಗಿರುವ ಮಾರ್ಗಸೂಚಿ ದರ ಶೇ. 0.2 ರಷ್ಟು ಆಸ್ತಿ ತೆರಿಗೆ ಪಾವತಿಸಬೇಕಿದೆ. ಸ್ವತ್ತು ಮಾಲೀಕರೇ ಉಪಯೋಗಿಸುತ್ತಿದ್ದರೆ ಮಾರ್ಗಸೂಚಿ ದರದ ಶೇ0.1 ರಷ್ಟು ತೆರಿಗೆ ಅನ್ವಯವಾಗಲಿದೆ. ಆಸ್ತಿ ಸಂಪೂರ್ಣ ಖಾಲಿ ಪ್ರದೇಶವಾಗಿದ್ದರೆ ಶೇ.0.25 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ವಸತಿಯೇತರ ಭೂಮಿ, ನಿವೇಶನ ಮತ್ತು ಖಾಲಿ ನಿವೇಶನಗಳಿಗೆ ಕೂಡಾ ಎರಡು ವರ್ಗವಾಗಿಸಲಾಗಿದೆ. ನಿವೇಶನ ಬಾಡಿಗೆ ನೀಡಿದರೆ, ಪ್ರತಿ ಚದರ ಅಡಿಗೆ ಮಾರ್ಗಸೂಚಿ ದರದಲ್ಲಿ ಶೇ. 0.5 ರಷ್ಟು, ಸ್ವಂತ ಬಳಕೆಯಲ್ಲಿದ್ದರೆ ಶೇ. 0.25 ರಷ್ಟು, ಕಟ್ಟಡಕ್ಕೆ ಶೇ. 0.5 ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ನಾಗರಿಕರು ಆಕ್ಷೇಪಣೆ ಗಳಿದ್ದರೆ 15ದಿನಗಳೊಳಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಲ್ಲಿಸಬೇಕಿದೆ. spcommrev@bbmp.gov.in ಇ-ಮೇಲ್ ಕೂಡ ಮಾಡಬಹುದಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರಡು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಮಾಹಿತಿ, ವಿನಾಯಿತಿ ಕೊಟ್ಟು ಅರ್ಧದಷ್ಟಾದರೂ ತೆರಿಗೆ ಸಂಗ್ರಹಕ್ಕೆೆ ಪಾಲಿಕೆ ಪ್ಲಾನ್: ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆೆ ಇತ್ತೀಚೆಗೆ ಹೊಸ ಯೋಜನೆ ರೂಪಿಸಲಾಗಿತ್ತು. ತೆರಿಗೆ ಪಾವತಿಯಲ್ಲಿ ರಿಯಾಯಿತಿ ಕೊಡುವ ಮೂಲಕ ಅರ್ಧದಷ್ಟನ್ನಾದರೂ, ತೆರಿಗೆ ಸಂಗ್ರಹಿಸಲು ಮುಂದಾಗಿದೆ. ನಗರದ ಹಲವು ಭಾಗಗಳಲ್ಲಿ ಕಟ್ಟಡ ಮಾಲೀಕರು ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ಶೇ.50ರಷ್ಟು ತೆರಿಗೆ ಪಾವತಿ ಮಾಡಿದರೆ ಸಾಕು ಎಂದು ರಿಯಾಯಿತಿ ನೀಡುವ ಮೂಲಕ ಅರ್ಧದಷ್ಟಾದರೂ ತೆರಿಗೆ ಸಂಗ್ರಹಿಸುವ ಮೂಲಕ ಆಸ್ತಿ ತೆರಿಗೆ ಸಂಗ್ರಹದ ಗುರಿ ತಲುಪಲು ಪಾಲಿಕೆ ಪ್ಲಾನ್ ಹಾಕಿಕೊಂಡಿದೆ. ಈ ಆರ್ಥಿಕ ವರ್ಷ ಪೂರ್ಣಗೊಳ್ಳುವುದರೊಳಗೆ ಆದಾಯದ ಗುರಿ ತಲುಪುದಕ್ಕೆ ತಯಾರಿ ನಡೆಸಿದೆ. ಬಾಕಿ ಉಳಿದಿರುವ ತೆರಿಗೆಯಲ್ಲಿ ಅರ್ಧದಷ್ಟು ಪಾವತಿಸಲು ಅಪೀಲು ಮಾಡಿದವರಿಗೆ ಈ ವಿನಾಯಿತಿ ದೊರೆಯಲಿದೆ ಎಂದು ಬಿಬಿಎಂಪಿ ತಿಳಿಸಿತ್ತು.
ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಬಿಡಿಎ ಹೊರಡಿಸಿದ್ದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್