ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ 2014 ರಲ್ಲಿ ಪ್ರಾರಂಭವಾದ ನಗರದ ಹೊರಭಾಗ ಗೋವಿಂದಪುರದಲ್ಲಿ ಆಶ್ರಯ ಯೋಜನೆಯಡಿ 3 ಸಾವಿರ ಮನೆಗಳ ನಿರ್ಮಾಣಕ್ಕೆ ಜಿ ಪ್ಲಸ್ ಟು ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹಾಲಿ 624 ಜನರಿಗೆ ಮನೆಯನ್ನು ಹಸ್ತಾಂತರ ಮಾಡಲಾಗಿದೆ. ಆದರೆ, 625 ಮನೆಗಳಲ್ಲಿ ಕೇವಲ 100 ಮನೆಗಳಲ್ಲಿ ಮಾತ್ರ ವಾಸವಾಗಿದ್ದಾರೆ. ಮೂಲ ಸೌಕರ್ಯಗಳಿಲ್ಲದ ಕಾರಣ ಉಳಿದ ಮನೆಗಳಲ್ಲಿ ಬಂದು ವಾಸಿಸಲು ಜನ ಹಿಂದೇಟು ಹಾಕುತ್ತಿದ್ದಾರೆ.
ಇಲ್ಲಿನ ಮನೆಗಳಿಗೆ ತಾತ್ಕಾಲಿಕ ವಿದ್ಯುತ್ ನೀಡಲಾಗಿದೆ. ಕುಡಿಯುವ ನೀರು, ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದರ ನಡುವೆ ಮತ್ತೆ 652 ಮನೆಗಳು ಹಸ್ತಾಂತರಕ್ಕೆ ಸಿದ್ಧವಾಗಿವೆ. ಆದರೆ ಮೂಲ ಸೌಕರ್ಯ ಕಲ್ಪಿಸದ ಕಾರಣಕ್ಕೆ ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮ ಮುಂದಕ್ಕೆ ಹೋಗುತ್ತಿದೆ. ಮನೆಗಳಿಗೆ ನೀಡಬೇಕಾದ ನೀರು, ವಿದ್ಯುತ್, ರಸ್ತೆ, ಒಳಚರಂಡಿ, ಬೀದಿದೀಪ ಹಾಗೂ ಬಸ್ ವ್ಯವಸ್ಥೆ ಇಲ್ಲದೇ ಜನ ಬಳಲುವಂತಾಗಿದೆ.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗೋವಿಂದಪುರಕ್ಕೆ ಭೇಟಿ ನೀಡಿ ಸ್ಥಳದಲ್ಲಿನ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಹಾಗೂ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಜೊತೆಗೆ ಹಾಲಿ ವಾಸ ಇರುವ ಜನರ ಸಮಸ್ಯೆಯನ್ನೂ ಆಲಿಸಿದರು. ನಂತರ ಮನೆಗಳನ್ನು ವೀಕ್ಷಿಸಿದರು. ಎಂಎಲ್ಸಿ ಬಲ್ಕಿಶ್ ಬಾನು ಜೊತೆಗಿದ್ದರು.
ನಂತರ ಮಾತನಾಡಿದ ಸಚಿವರು, "2014ರಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಜಿ ಪ್ಲಸ್ ಟು ಮನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿತ್ತು. ಆದರೆ ನಂತರ ಬಂದ ಮನೆಗಳಿಗೆ ಹೆಚ್ಚು ಹಣ ಪಡೆದು ಕಟ್ಟಬೇಕೆಂದು ಹೇಳಿದ್ರಿ, ಇಲ್ಲಿ ಬಂದು ನೋಡಿದ್ರೆ ನೀರು, ಕರೆಂಟ್, ರಸ್ತೆ ಸಮಸ್ಯೆ ಇದೆ. ಈಗ ಗುತ್ತಿಗೆದಾರರಿಗೆ ಮುಂದಿನ 20 ದಿನಗಳಲ್ಲಿ ರಸ್ತೆ, ವಿದ್ಯುತ್ ಚರಂಡಿ ಸಮಸ್ಯೆ ಪರಿಹರಿಸಲು ಸೂಚಿಸಿದ್ದೇನೆ. ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸುತ್ತೇವೆ. ಇಲ್ಲಿ ಜಿ ಪ್ಲಸ್ ಟು ಮನೆ ಇರುವ ಕಾರಣಕ್ಕೆ ಮೇಲಿನ ಮನೆಗಳಿಗೆ ನೀರು ಬೇಕಾಗುತ್ತದೆ. ಹಾಗಾಗಿ ಚರ್ಚೆ ನಡೆಸುತ್ತೇನೆ" ಎಂದರು.
"ಇಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಇದೆ. ಪರ್ಮನೆಂಟ್ ವಿದ್ಯುತ್ಗೆ ಹಣ ಬೇಕಾಗುತ್ತದೆ. ಇಲ್ಲಿ ಬಸ್ ಹಾಗೂ ಬೀದಿ ದೀಪದ ವ್ಯವಸ್ಥೆ ಮಾಡುತ್ತೇನೆ. ವಿದ್ಯುತ್ಗೆ 15 ಕೋಟಿ ರೂ. ಬೇಕಾಗುತ್ತದೆ. ಅಲ್ಲದೇ ನೀರು, ಒಳಚರಂಡಿ ಸಮಸ್ಯೆ ಬಗೆಹರಿಸಲಾಗುತ್ತದೆ. ಜನವರಿ 30ರಂದು ಸಚಿವ ಜಮೀರ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಮುಂದಿನ 25 ದಿನಗಳ ಒಳಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಮುಗಿಸಲು ಹೇಳಿದ್ದೇನೆ. ಆದಷ್ಟು ಬೇಗ ಫಲಾನುಭವಿಗಳಿಗೆ ಕೀ ಹಸ್ತಾಂತರ ಮಾಡಲಾಗುವುದು" ಎಂದು ತಿಳಿಸಿದರು.
"ಇಲ್ಲಿ ನೀರು, ವಿದ್ಯುತ್, ರಸ್ತೆ, ಒಳ ಚರಂಡಿ ಹಾಗೂ ಬಸ್ ವ್ಯವಸ್ಥೆ ಇಲ್ಲ. ಅಲ್ಲದೇ ಪ್ರತಿ ತಿಂಗಳು 3 ಸಾವಿರ ರೂ. ಮನೆ ಲೋನ್ ಸಹ ಕಟ್ಟಬೇಕಿದೆ. ಬಸ್ಸಿನ ಸೌಕರ್ಯ ಇಲ್ಲದ ಕಾರಣ ಮಕ್ಕಳನ್ನು ಬಿಡುವುದಕ್ಕೆ ಹಾಗೂ ಕರೆದುಕೊಂಡು ಬರುವುದಕ್ಕೆ ದೊಡ್ಡ ಸಮಸ್ಯೆ ಉಂಟಾಗಿದೆ. ಹಾಲಿ ಇಲ್ಲಿ ಸುಮಾರು 150 ಕುಟುಂಬಗಳಿವೆ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು" ಎಂದು ಶೋಭಾ ಒತ್ತಾಯಿಸಿದರು.
"ಮೂಲ ಸೌಕರ್ಯ ಸಮಸ್ಯೆ ಇದೆ. ಗೋವಿಂದಪುರಕ್ಕೆ ಸಂಪರ್ಕ ಕಲ್ಪಿಸುವ ಭಾಗದಿಂದಲೂ ವಿದ್ಯುತ್ ಸಂಪರ್ಕ ಇಲ್ಲ. ಇನ್ನೂ ರಸ್ತೆ ವ್ಯವಸ್ಥೆ ಇಲ್ಲ. ಇಲ್ಲಿ ಏನೂ ಸಿಗುವುದಿಲ್ಲ. ಎಲ್ಲದಕ್ಕೂ ಸಹ ನಾವು ಸಿಟಿಗೆ ಹೋಗಬೇಕಿದೆ. ಮನೆಗಳ ಬಾಗಿಲು ಎದುರು ಇರುವುದರಿಂದ ಕೆಲವರು ಈ ಮನೆಗಳಿಗೆ ಬರುತ್ತಿಲ್ಲ. ಮೊದಲು ಬ್ಯಾಂಕ್ಗೆ ಹಣ ಕಟ್ಟುವಾಗ 2,500 ರೂ. ತೆಗೆದುಕೊಳ್ಳುತ್ತಿದ್ದರು. ಈಗ ಲೋನ್ ಹಣ ಹೆಚ್ಚಾಗಿದೆ ಎಂದು 5 ಸಾವಿರ ರೂ. ಕಟ್ಟಲು ಹೇಳುತ್ತಿದ್ದಾರೆ. ಇದು ನಮಗೆ ಸಮಸ್ಯೆ ತಂದೊಡ್ಡಿದೆ" ಎನ್ನುತ್ತಾರೆ ಗೋವಿಂದಪುರದ ನಿವಾಸಿ ಭಾರತಿ.
ಇದನ್ನೂ ಓದಿ: ಮೂಲಭೂತ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ಖರ್ಚು 38%!