ಮಂಗಳೂರು: ಫಳ್ನೀರ್ ಸೈಂಟ್ ಮೆರೀಸ್ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿನಿ ಪ್ರಿನ್ಸಿಟಾ ವಿಯನ್ನೆ ಡಿಸೋಜ 40.15 ನಿಮಿಷಗಳ ಕಾಲ ಯೋಗ ನಿದ್ರಾಸನದಲ್ಲಿ ನಿರಂತರವಾಗಿ ತಾಳ್ಮೆಯಿಂದ ಇದ್ದು, ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಿಸಿದ್ದಾಳೆ. ಈ ಸಾಧನೆಯ ಮೂಲಕ ಇವರು ಪುತ್ತೂರಿನ ಅದಿತಿ ಆರ್. ಐ. ಅವರು 19 ನಿಮಿಷಗಳಲ್ಲಿ ಮಾಡಿದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಈಕೆ ಎಲ್‌ಕೆಜಿಯಿಂದಲೇ ಯೋಗ ತರಬೇತಿ ಆರಂಭಿಸಿದ್ದಳು. ಯೋಗಗುರು ಕವಿತಾ ಅಶೋಕ್ ಅವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸದ ಮೂಲಕ ಈ ಗುರಿಯನ್ನು ಸಾಧಿಸಿದ್ದಾರೆ. ಯೋಗ ನಿದ್ರಾಸನ, ಯಾವುದೇ ಸಾಮಾನ್ಯ ಆಸನವಲ್ಲ. ಇದನ್ನು ತಾಳ್ಮೆ ಮತ್ತು ದೀರ್ಘಕಾಲೀನ ಶಕ್ತಿಯೊಂದಿಗೆ ನಿರ್ವಹಿಸಬೇಕು. 40.15 ನಿಮಿಷಗಳ ಕಾಲ ಯೋಗ ನಿದ್ರಾಸನದಲ್ಲಿ ಇರುವುದಕ್ಕೆ ಅಗತ್ಯವಿರುವ ದೈಹಿಕ ಮತ್ತು ಮಾನಸಿಕ ಸ್ಥೈರ್ಯವನ್ನು ಹೊಂದಲು ವೆನ್ಸಿಟಾ ಹಲವಾರು ತಿಂಗಳುಗಳ ಕಾಲ ಶ್ರಮಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಯೋಗಗುರು ಕವಿತಾ ಅಶೋಕ್, "ಯೋಗ ನಿದ್ರಾಸನವು ಭಾರತೀಯ ಋಷಿಮುನಿಗಳ ಆಧ್ಯಾತ್ಮಿಕ ಸಾಧನೆಗೆ ಸಂಬಂಧಿಸಿದ ಆಸನವಾಗಿದೆ. ಇದರಿಂದ ದೈಹಿಕ ಶಕ್ತಿಯೊಂದಿಗೆ, ಮಾನಸಿಕ ಶಾಂತಿ ಮತ್ತು ಏಕಾಗ್ರತೆಯನ್ನು ಅಭಿವೃದ್ಧಿಪಡಿಸಬಹುದು. ನಮ್ಮ ಮಕ್ಕಳು ಇದನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ, ಅದು ಅವರ ಜೀವನವನ್ನು ಹೆಚ್ಚು ಸದೃಢಗೊಳಿಸುತ್ತದೆ. ಪ್ರಿನ್ಸಿಟಾ ಈ ಸಾಧನೆ ಮಾಡಿದ್ದು, ಅವರ ನಿರಂತರ ಶ್ರಮ ಮತ್ತು ಪರಿಶ್ರಮಕ್ಕೆ ಫಲ ಸಿಕ್ಕಿದೆ" ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಪ್ರಿನ್ಸಿಟಾ ವಿಯನ್ನೆ ಡಿಸೋಜ, "ನಾನು 40 ನಿಮಿಷ 15 ಸೆಕೆಂಡ್ ಯೋಗ ನಿದ್ರಾಸನ ಮಾಡುವ ಮೂಲಕ ನನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಿಸಿದ್ದೇನೆ. ಈ ಸಾಧನೆಗೆ ನನ್ನ ಗುರು ಕವಿತಾ ಅಶೋಕ್ ಮತ್ತು ನನ್ನ ಪೋಷಕರ ಬೆಂಬಲ ತುಂಬಾ ಇದೆ. ಅವರಿಗೆ ಧನ್ಯವಾದಗಳು. ನಾನು 5ನೇ ತರಗತಿಯಿಂದ ಯೋಗ ಅಭ್ಯಾಸ ಮಾಡುತ್ತಿದ್ದೇನೆ. ಈ ಸಾಧನೆಯು ನನ್ನ ಸಾಧನೆಯ ಪ್ರಾರಂಭ ಮಾತ್ರ. ಇನ್ನಷ್ಟು ಉನ್ನತ ಗುರಿಗಳನ್ನು ತಲುಪಬೇಕಾಗಿದೆ" ಎಂದು ಹೇಳಿದರು.
ಕುಟುಂಬ ಮತ್ತು ಶಾಲೆಯ ಬೆಂಬಲ: ಪ್ರಿನ್ಸಿಟಾ, ನಾಗುರಿಯ ಪ್ರವೀಣ್ ನೇರಿ ಡಿಸೋಜ ಮತ್ತು ವಿನಿತಾ ಡಿಸೋಜ ದಂಪತಿಯ ಪುತ್ರಿ. ಅವರ ಸಾಧನೆಗೆ ಪೋಷಕರ ಬೆಂಬಲ ವಿಶೇಷವಾಗಿದೆ. ಇವರ ಶಾಲೆಯ ಮುಖ್ಯಶಿಕ್ಷಕಿ ಮೈಸಿ ಎ. ಸಿ. ಸಹ ಪ್ರಿನ್ಸಿಟಾ ಅವರ ಯಶಸ್ಸಿಗೆ ನಿರಂತರ ಪ್ರೋತ್ಸಾಹ ನೀಡಿದ್ದು, ವಿದ್ಯಾರ್ಥಿನಿಯ ಸಾಧನೆಗೆ ಇಡೀ ಶಾಲೆ ಹೆಮ್ಮೆ ಪಡುವಂತಾಗಿದೆ.
ಇದನ್ನೂ ಓದಿ: ಶಿಲೆಗಳಲ್ಲಿ ಕಲೆ ಅರಳಿಸುವ ಪ್ರತಿಭೆ: ದಾಖಲೆ ಪುಟ ಸೇರಿದ ಯುವತಿ