ಹುಬ್ಬಳ್ಳಿ: ವಿಶ್ವದರ್ಜೆಯ ನಿರ್ಮಾಣಕ್ಕಾಗಿ ಇಂದು ಚಾಲನೆ ನೀಡಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಕಾಮಗಾರಿ ಇನ್ನೆರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. 2ನೇ ಟರ್ಮಿನಲ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಸುಮಾರು 340 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಅತ್ಯಂತ ವೇಗವಾಗಿ ಕೆಲಸ ನಡೆಯುತ್ತಿದೆ. 2 ವರ್ಷಗಳ ನಂತರ ಇಲ್ಲಿ 4ರಿಂದ 10 ವಿಮಾನಗಳ ಪಾರ್ಕಿಂಗ್ ವ್ಯವಸ್ಥೆ ಸಾಧ್ಯವಾಗಲಿದೆ. ನಿತ್ಯ 2,400 ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ. ಇಂದು ಪ್ರಧಾನಿ ಮೋದಿಯವರು ಭಾರತದಾದ್ಯಂತ 15 ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್ ಕಟ್ಟಡಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಕಾಮಗಾರಿಯೂ ಒಂದು. 350 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಮೂಲಸೌಕರ್ಯದೊಂದಿಗೆ ಹುಬ್ಬಳ್ಳಿ ಹೊಸ ಟರ್ಮಿನಲ್ ಕಂಗೊಳಿಸಲಿದೆ ಎಂದು ತಿಳಿಸಿದರು.
ಅವಳಿ ನಗರಗಳಿಗೆ ಹೊಸ ಕಾಮಗಾರಿ ಹೆಮ್ಮೆಯ ಗರಿ: ಅಭಿವೃದ್ಧಿ ಹೊಂದುತ್ತಿರುವ ಅವಳಿ ನಗರಗಳಿಗೆ ಈ ಹೊಸ ಕಾಮಗಾರಿ ಹೆಮ್ಮೆಯ ಗರಿಯಾಗಲಿದ್ದು, ವಿಕಸಿತ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂ.ಆರ್.ಪಾಟೀಲ್, ಪ್ರಸಾದ ಅಬ್ಬಯ್ಯ, ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಭಾರದ್ವಾಡ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಎರಡು ಮೂರು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಫೈನಲ್: ಪ್ರಹ್ಲಾದ್ ಜೋಶಿ