ಹುಬ್ಬಳ್ಳಿ: ''ಸಿಎಂ, ಡಿಸಿಎಂ ಹುದ್ದೆ ಖಾಲಿಯಿಲ್ಲ, ಅದನ್ನೆಲ್ಲ ಹೈ - ಕಮಾಂಡ್ ತೀರ್ಮಾನ ಮಾಡುತ್ತೆ. ಒಕ್ಕಲಿಗ ಶ್ರೀಗಳ ಹೇಳಿಕೆಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ'' ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ''ಮುಖ್ಯಮಂತ್ರಿ ಆಗಬೇಕಾದರೆ ಹೈಕಮಾಂಡ್, ಎಲ್ಲ ಶಾಸಕರ ನಿರ್ಧಾರದ ಮೇಲೆ ಆಗಬೇಕು, ಹೈಕಮಾಂಡ್ ಏನು ತೀರ್ಮಾನ ಮಾಡಿರುತ್ತೆ ಅದೇ ಫೈನಲ್. ಅದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ'' ಎಂದ ಅವರು, ''ಸರ್ಕಾರ ನಡೆಸಬೇಕಾದರೆ ದರ ಏರಿಸಲೇಬೇಕು. ಹಾಲಿನ ದರದ ಬಗ್ಗೆ ಈಗಾಗಲೇ ಸಿಎಂ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹಾಲಿನ, ಪೆಟ್ರೋಲ್ ಡಿಸೇಲ್ ದರ ಎಲ್ಲವೂ ಕಡಿಮೆ ಇದೆ. ನಮ್ಮ ಸರ್ಕಾರ ನಡೆಸಬೇಕಾದರೆ ದರ ಏರಿಸಬೇಕಾಗುತ್ತದೆ. 60 ಸಾವಿರ ಕೋಟಿ ರೂಪಾಯಿಯನ್ನು ನಾವು ಗ್ಯಾರಂಟಿಗೆ ಕೊಡಬೇಕಾಗುತ್ತೆ. ಅದಕ್ಕಾಗಿ ಮಾಡಬೇಕು. ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ ಮಾಡಿದ್ದಾರೆ. ಅದರ ಬಗ್ಗೆ ಮಾತಾಡೊದು ಬೇಡ್ವಾ. ನಿರ್ಮಲಾ ಸೀತಾರಮನ್ ಇದರ ಬಗ್ಗೆ ಮಾತಾಡಬೇಕು. ಅವರು ದೇಶ ನಡೆಸಬೇಕಾದರೆ, ನಾವು ರಾಜ್ಯ ನಡೆಸಬೇಕು ಎಂದು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.
''ರಾಮ ಮಂದಿರ ಸೋರುತ್ತಿದೆ, ಯಾರು ನಿಲ್ಲಿಸಬೇಕು. ಬಿಜೆಪಿ ಅವರು ಆರೋಪ ಮಾಡುವುದೇ ಅವರ ಕೆಲಸ, ರಾಮ ಮಂದಿರ ಸೋರುತ್ತಿದೆ ಅದನ್ನ ಯಾರು ಹೋಗಿ ನಿಲ್ಲಸಬೇಕು. ನೀಟ್ ಪೇಪರ್ ಲೀಕ್ ಆಯಿತು. ಅದರ ಬಗ್ಗೆ ಯಾರು ಮಾತಾಡೋದು ಬೇಡ್ವಾ. ಬಿಜೆಪಿ ಅವರು ಯಾವುದೇ ರೂಲಿಂಗ್ ಸರ್ಕಾರ ಇರುತ್ತೆ ಅದರ ವಿರುದ್ಧ ಮಾತನಾಡೋದೆ ಅವರ ಕೆಲಸ'' ಎಂದು ಹರಿಹಾಯ್ದರು.
ಬರ ಪರಿಹಾರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ನಾವು ಸರ್ಕಾರ ನಡೆಸ್ತಾ ಇದ್ದು ಒಂದು ವರ್ಷ ಆಯ್ತು, ಕೇಂದ್ರ ಸರ್ಕಾರದ ಹತ್ತು ವರ್ಷಗಳಲ್ಲಿ ಯಾವುದೇ ಲೋಪ ದೋಷಗಳು ಇಲ್ವಾ. ಬೆಲೆ ಏರಿಕೆ, ಎಂಪ್ಲಾಯಮೆಂಟ್, ಜಿಡಿಪಿ ಇವು ಯಾವುದು ಅವರಿಗೆ ಕಾಣ್ತಿಲ್ವಾ'' ಎಂದು ಪ್ರಶ್ನಿಸಿದರು.