ಬೆಂಗಳೂರು: ನೀರಾವರಿ ಪ್ರದೇಶದ ನಾಲೆಗಳಲ್ಲಿ ಕಾನೂನು ಬಾಹಿರವಾಗಿ ನೀರಿನ ಕೊಳವೆಗಳನ್ನು ಹಾಕುವುದನ್ನು ತಡೆಯಲು ಮತ್ತು ಕೊನೆಯ ಫಲಾನುಭವಿಗಳಿಗೆ ನೀರು ತಲುಪುವಂತೆ ನೋಡಿಕೊಳ್ಳುವ ಉದ್ದೇಶದ 2024ನೇ ಸಾಲಿನ ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಮಂಡಿಸಿದರು.
ಕರ್ನಾಟಕ ನೀರಾವರಿ ಅಧಿನಿಯಮ - 1965ಕ್ಕೆ ತಿದ್ದುಪಡಿ ತರಲು ಈ ವಿಧೇಯಕ ಮಂಡಿಸಲಾಗಿದೆ. ಕೃಷಿ ಉಪಕರಣಗಳು, ನಾಲೆ, ನೀರು ಪೂರೈಕೆ ಪ್ರದೇಶ, ನೀರಾವರಿ ನ್ಯಾಯಾಲಯ, ಕಾರ್ಯಪಡೆ ಮತ್ತು ಕಾಲುವೆಯಿಂದ ನೀರಿನ ಅನಧಿಕೃತ ಬಳಕೆ ಎಂಬ ಹೊಸ ಪರಿಭಾಷೆಗಳನ್ನು ಸೇರಿಸಲಾಗುತ್ತದೆ. ಭೂಸ್ವಾಧೀನ ಅಧಿನಿಯಮ -1894 ರ ಬದಲಾಗಿ ಭೂ ಆರ್ಜನೆ, ಪುನರ್ವ್ಯವಸ್ಥೆಯಲ್ಲಿ ನ್ಯಾಯೋಚಿತ ಪಾಲನೆ ಮತ್ತು ಪಾರದರ್ಶಕತೆ ಹಕ್ಕು ಅಧಿನಿಯಮ-2013ನ್ನು ಪ್ರತಿಯೋಜಿಸಲಾಗುತ್ತದೆ.
ಅಂತರ್ಜಲವನ್ನು ಹೊರತೆಗೆಯಲು ಮತ್ತು ಬಳಸಲು ಅನುಮತಿ ಮಂಜೂರು ಮಾಡಲು ಅಸ್ತಿತ್ವದಲ್ಲಿರುವ ಅಂತರ್ಜಲ ಬಳಕೆದಾರರ ನೋಂದಣಿ ಮಾಡಲು 28ಎ ಮತ್ತು 28ಬಿ ಪ್ರಕರಣಗಳ ಉಲ್ಲಂಘನೆಗಾಗಿ ದಂಡ ವಿಧಿಸುವ ಉದ್ದೇಶವನ್ನು ಈ ವಿಧೇಯಕ ಹೊಂದಿದೆ. ಅಪರಾಧ ಎಂದು ನಿರ್ಣಯವಾದ ಮೇಲೆ ಶಿಕ್ಷೆಯ ಅವಧಿಯನ್ನು ಹೆಚ್ಚಿಸಲು, ಶಿಕ್ಷೆಯ ಕಾಲಾವಧಿಯನ್ನು ವಿಸ್ತರಿಸಲು ಹಾಗೂ ದಂಡದ ಮೊತ್ತ ಹೆಚ್ಚಿಸಲಾಗುತ್ತದೆ.
ನೀರಾವರಿ, ನ್ಯಾಯಾಲಯದ ಅಂತರ್ನಿಹಿತ ಅಧಿಕಾರವನ್ನು ಉಳಿಸುವಿಕೆ, ವಿಚಾರಣೆ ಸ್ಥಳ, ಸಾಕ್ಷ್ಯಗಳ ಕಾರ್ಯವಿಧಾನ, ವಿಚಾರಣೆ ಮತ್ತು ಸಮನ್ಸ್ ಮಾಡುವುದು ಇತ್ಯಾದಿಗಳನ್ನು ಸೇರಿಸಲಾಗುತ್ತದೆ. ತ್ವರಿತ ವಿಲೇವಾರಿಗಾಗಿ ಆರು ತಿಂಗಳ ಕಾಲಾವಕಾಶ ನಿಗದಿಪಡಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ.
ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ: ನಗರ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿಯಡಿಯಲ್ಲಿ ಎಲ್ಲಾ ಆಸ್ತಿಗಳನ್ನು ಅವುಗಳ ಆರ್ಥಿಕ ಸಂಪನ್ಮೂಲಗಳ ಪರಿಜಾಲ(network) ಅಡಿ ತರುವ ಉದ್ದೇಶದ 2024ನೇ ಸಾಲಿನ ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕವನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಂಡಿಸಿದರು.
ಈ ವಿಧೇಯಕವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ರಲ್ಲಿ ಉಪಬಂಧಿಸಲಾದಂತೆ ಸರ್ಕಾರಿ ಭೂಮಿಯ ಹೊರತಾಗಿ ಅನಧಿಕೃತ ವಸತಿ ಪ್ರದೇಶಗಳಲ್ಲಿನ ಆವರಣಗಳು, ಕಟ್ಟಡಗಳಿಗೆ ಹಾಗೂ ಅಧಿಕೃತ ವಸತಿ ಪ್ರದೇಶಗಳಲ್ಲಿನ ಅನಧಿಕೃತ ಕಟ್ಟಡಗಳಿಗೆ ಸ್ವತ್ತು ತೆರಿಗೆಯ ಉಪಬಂಧಗಳನ್ನು ವಿಸ್ತರಿಸಲಾಗುತ್ತದೆ. ಈ ಆಸ್ತಿ ತಂತ್ರಾಂಶದ ಕುರಿತು ಅವಶ್ಯಕ ಉಪಬಂಧಗಳನ್ನು ಕಲ್ಪಿಸಲು ಅಮಧಿನಿಯಮಗಳ ಉಪಬಂಧಗಳ ಅನಾನುಪಾಲನೆ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ದಂಡನೆಯನ್ನು ಉಪಬಂಧಿಸಲು ಅವಕಾಶ ಕಲ್ಪಿಸಲಿದೆ.
ಹೀಗಾಗಿ ಕರ್ನಾಟಕ ಮುನ್ಸಿಪಾಲಿಟಿಗಳ ಅಧಿನಿಯಮ-1964ನ್ನು ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ-1976ಕ್ಕೆ ತಿದ್ದುಪಡಿ ಮಾಡಲು ಈ ವಿಧೇಯಕವನ್ನು ಮಂಡಿಸಲಾಗಿದೆ.
ಇದನ್ನೂ ಓದಿ: ರೈತನಿಗೆ ಪ್ರವೇಶ ನಿರಾಕರಣೆ ಪ್ರಕರಣ: ಎಲ್ಲಾ ಮಾಲ್ಗಳಿಗೂ ಸರ್ಕಾರದಿಂದ ಮಾರ್ಗಸೂಚಿ- ಡಿ.ಕೆ.ಶಿವಕುಮಾರ್ - DK Shivakumar