ಬಳ್ಳಾರಿ: ನಟ ದರ್ಶನ್ ಬೇಡಿಕೆಯ ಹಿನ್ನೆಲೆಯಲ್ಲಿ ಅವರಿರುವ 15ನೇ ಸೆಲ್ಗೆ ಟಿವಿ ನೀಡಲು ಜೈಲಾಧಿಕಾರಿಗಳು ಸಿದ್ಧತೆ ಮಾಡಿದ್ದಾರೆ. ಹೊಸ ಟಿವಿಯನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಹಳೇ ಟಿವಿಯನ್ನೇ ರಿಪೇರಿ ಮಾಡಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರತಿವಾರವೂ ವೈದ್ಯರು ಕೈದಿಗಳ ಆರೋಗ್ಯ ಪರಿಶೀಲನೆ ಮಾಡುತ್ತಿದ್ದು, ಇಂದು 385 ಕೈದಿಗಳ ಜೊತೆಗೆ ದರ್ಶನ್ ಅವರ ಆರೋಗ್ಯವನ್ನೂ ಪರಿಶೀಲನೆ ಮಾಡಲಾಗಿದೆ. ಈ ವೇಳೆ ನಟನ ಆರೋಗ್ಯ ಸ್ಥಿರವಾಗಿದ್ದು, ಬಿಪಿ, ಶುಗರ್ ನಾರ್ಮಲ್ ಆಗಿದೆ ಎಂದು ತಿಳಿದುಬಂದಿದೆ.
ಸರ್ಜಿಕಲ್ ಚೇರ್ ವ್ಯವಸ್ಥೆ: ಇತ್ತೀಚೆಗೆ ದರ್ಶನ್ ಮನವಿ ಮೇರೆಗೆ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಸರ್ಜಿಕಲ್ ಚೇರ್ ತರಿಸಲಾಗಿದೆ. ತಮಗೆ ಬೆನ್ನೆಲುಬು ಸಮಸ್ಯೆ ಇದೆ. ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇರುವುದರಿಂದ ಶೌಚಕ್ಕೆ ಕಷ್ಟವಾಗುತ್ತದೆ. ಹಾಗಾಗಿ, ಸರ್ಜಿಕಲ್ ಚೇರ್ ನೀಡಬೇಕು ಎಂದು ಡಿಐಜಿ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ಮೆಡಿಕಲ್ ರೆಕಾರ್ಡ್ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಪರಿಶೀಲಿಸುತ್ತಾರೆ. ಆ ನಂತರ ಅಗತ್ಯ ಸೌಲಭ್ಯ ಕೊಡಲಾಗುತ್ತದೆ. ಅವಶ್ಯಕತೆ ಇದ್ದರೆ ದರ್ಶನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್ಗೂ ಕೊಡಿಸುತ್ತೇವೆ ಎಂದು ಡಿಐಜಿ ಹೇಳಿದ್ದರು.
ಅದರಂತೆ, ಸೆಂಟ್ರಲ್ ಜೈಲಿಗೆ ಬಂದಿದ್ದ ತಜ್ಞ ವೈದ್ಯರು, ದರ್ಶನ್ ಬೆನ್ನು ಹಾಗೂ ಕೈ ನೋವಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಬಳ್ಳಾರಿ ಜೈಲಿನಲ್ಲಿರುವ ಮೆಡಿಕಲ್ ವರದಿ ಮತ್ತು ಪರಪ್ಪನ ಅಗ್ರಹಾರ ಜೈಲಿನ ಮೆಡಿಕಲ್ ರಿಪೋರ್ಟ್ ತಾಳೆ ಮಾಡಿ ನೋಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸರ್ಜಿಕಲ್ ಚೇರ್ ಒದಗಿಸಲಾಗಿತ್ತು.
ಚಾರ್ಜ್‌ಶೀಟ್ ಸಲ್ಲಿಕೆ: ಹತ್ಯೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಆರೋಪಿಗಳ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದುವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಸೇರಿದಂತೆ 231 ಸಾಕ್ಷ್ಯಗಳನ್ನೊಳಗೊಂಡಂತೆ ಒಟ್ಟು 3,991 ಪುಟಗಳುಳ್ಳ 07 ಸಂಪುಟಗಳ 10 ಕಡತಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಬೆಂಗಳೂರು ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಎಸ್. ನೇತೃತ್ವದಲ್ಲಿ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ಎನ್. ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ತನಿಖೆ ಕೈಗೊಂಡಿತ್ತು. ಇದೀಗ, ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.