ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದಿರುವ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ಜ.27 ರಂದು ಜರುಗಲಿದ್ದು, ಲಕ್ಷಾಂತರ ಜನ ಸೇರಲಿದ್ದಾರೆ. ಹಾಗಾಗಿ ಜಾತ್ರೆಗೆ ಭರದಿಂದ ಸಿದ್ದತೆ ನಡೆದಿದ್ದು, ದಿನಗಣನೆ ಶುರುವಾಗಿದೆ.
ಗವಿಸಿದ್ದೇಶ್ವರ ಜಾತ್ರೆ ವರ್ಷದಿಂದ ವರ್ಷಕ್ಕೆ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ಇದು ಕೇವಲ ಸಾಂಪ್ರದಾಯಿಕ ಜಾತ್ರೆಯಾಗಿರದೇ, ಜ್ಞಾನ, ವೈಚಾರಿಕತೆ, ಸಂಸ್ಕ್ರತಿಯ ಮೇಲೆ ಬೆಳಕು ಚೆಲ್ಲಿ ಮುನ್ನೆಡೆಸುವ ಮಹತ್ವದ ಜಾತ್ರೆಯಾಗಿದೆ. ಇಲ್ಲಿಗೆ ಆಗಮಿಸುವ ಯಾತ್ರಿಕರಲ್ಲಿ ಭಕ್ತಿಯ ಜೊತೆಗೆ ಏನೋ ಆನಂದ, ಉತ್ಸಾಹ ಮಡುಗಟ್ಟಿ ನಿಂತಿರುತ್ತದೆ.
ದಾಸೋಹ ಸೇವೆ : ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಾತ್ರಾ ಮಹಾ ದಾಸೋಹದ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಭಕ್ತರ ಸೇವೆಯಲ್ಲಿ ಭಗವಂತನನ್ನು ಕಾಣುವ, ಸದ್ದುಗದ್ದಲವಿಲ್ಲದೇ ಅನ್ನ, ಅಕ್ಷರ, ಆಧ್ಯಾತ್ಮ ಹಾಗೂ ಆರೋಗ್ಯ ದಾಸೋಹ ಮಾಡುತ್ತಾ ಭಕ್ತರ ಮಕ್ಕಳಿಗೆ ಜ್ಞಾನ ಮತ್ತು ಹಸಿವು ನೀಗಿಸುವ ಕೈಂಕರ್ಯ ಮಾಡುತ್ತಿದೆ. 3500 ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಉಚಿತ ವಸತಿ ನಿಲಯ ಆರಂಭಿಸಿ, ದಾಸೋಹ ಪರಂಪರೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಜಾತ್ರೆಯ ಅಂಗವಾಗಿ 6 ಎಕರೆ ಪ್ರದೇಶದಲ್ಲಿ ಸುಮಾರು 1000 ಭಕ್ತಾದಿಗಳು ಏಕಕಾಲದಲ್ಲಿ ಪ್ರಸಾದ ಸೇವಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸತತ ಒಂದು ತಿಂಗಳ ಕಾಲ ಜಾತ್ರೆಗೆ ಬಂದವರಿಗೆ ಪ್ರಸಾದ ವ್ಯವಸ್ಥೆ ಇರಲಿದೆ.
ಹತ್ತು ಲಕ್ಷ ರೊಟ್ಟಿ ಸಂಗ್ರಹ : ಗವಿಸಿದ್ದೇಶ್ವರ ಜಾತ್ರೆಯಲ್ಲಿನ ಪ್ರಸಾದ ಮೆಚ್ಚಿ ಕೆಲವರು ಇದನ್ನ ರೊಟ್ಟಿ ಜಾತ್ರೆ ಎಂದು ಬಣ್ಣಿಸಿದ್ದಾರೆ. ಬೃಹದಾಕಾರದ 45*50 ವಿಸ್ತೀರ್ಣದ ಎರಡು ಕೋಣೆಗಳು ಕೇವಲ ರೊಟ್ಟಿ ಸಂಗ್ರಹಕ್ಕಾಗಿಯೇ ನಿರ್ಮಿಸಲಾಗಿದೆ. ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ರೊಟ್ಟಿಗಳು ಸಂಗ್ರಹಗೊಂಡಿವೆ. ಜಾತ್ರೆ ಮುಗಿಯುವುದರೊಳಗೆ ಸುಮಾರು ಹತ್ತು ಲಕ್ಷ ರೊಟ್ಟಿಗಳು ಸಂಗ್ರಹವಾಗುವ ನಿರೀಕ್ಷೆ ಇದೆ.
ಅಲ್ಲದೇ ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಎಳ್ಳು ಮತ್ತು ಶೇಂಗಾ ಹೋಳಿಗೆಗಳನ್ನ ಲಕ್ಷ ಲಕ್ಷ ಲೆಕ್ಕದಲ್ಲಿ ತಯಾರಿಸಿ, ಭಕ್ತರು ಶ್ರೀ ಮಠಕ್ಕೆ ಅರ್ಪಿಸುತ್ತಿದ್ದಾರೆ. ಅನ್ನ, ಸಾಂಬರ್ ಜೊತೆಗೆ ಕಡ್ಲೆಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿ ಚಟ್ನಿ, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ಇಲ್ಲಿ ಉಣಬಡಿಸಲಾಗುತ್ತದೆ.
ಆಧ್ಯಾತ್ಮ, ಸಂಸ್ಕೃತಿ, ಭಕ್ತಿ ಶ್ರದ್ಧೆಗಳ ಸಂಗಮ: ಕೊಪ್ಪಳ ಗವಿಮಠ ಜಾತ್ರೆ ಎಂದರೆ ಅದು ಆಧ್ಯಾತ್ಮ- ಸಂಸ್ಕೃತಿ - ಭಕ್ತಿ ಶ್ರದ್ಧೆಗಳ ಸಂಗಮ. ಸದಾ ಒಂದಿಲ್ಲೊಂದು ಹೊಸ ಚಿಂತನೆ ಆಲೋಚನೆಗಳನ್ನು ಹೊತ್ತುಕೊಂಡು ಜಾತ್ರೆಗೆ ಬರುವ ಸದ್ಭಕ್ತರಿಗೆ ಸಾಹಿತ್ಯ - ಅಧ್ಯಾತ್ಮಿಕ - ಸಾಂಸ್ಕೃತಿಕ ಜ್ಞಾನದೌತಣ ಉಣಬಡಿಸಲಾಗುತ್ತದೆ. ಜಾತ್ರೆ ಆರಂಭದ ದಿನದಿಂದ ಮೂರು ದಿನಗಳ ಕಾಲ ವಿವಿಧ ಅಧ್ಯಾತ್ಮಿಕ ಅನುಭಾವಿಗಳ ಚಿಂತನಗೋಷ್ಠಿ ನಡೆಯಲಿವೆ. ಜೊತೆಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿವೆ. ನಾಡಿನ ಹೆಸರಾಂತ ಸಂಗೀತಗಾರರಿಂದ ಸಂಗೀತ ಸೇವೆ ಜರುಗಲಿದೆ. ಜೊತೆಗೆ ವಿಭಿನ್ನ, ವಿಶಿಷ್ಟವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರಾ ಆವರಣದಲ್ಲಿ ವಿವಿಧ ಮಳಿಗೆಗಳು: ಗವಿಸಿದ್ದೇಶ್ವರ ಜಾತ್ರೆ ವಿನೂತನ ವಿಶೇಷತೆಯ ಹೊಸತನದ ಆಧುನಿಕ ಸ್ಪರ್ಶತೆಯ ಸಂಗಮ. ಧಾರ್ಮಿಕ- ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಜಾತ್ರಾ ಮಹೋತ್ಸವದ ವಿಶೇಷತೆಯಾಗಿದೆ. ಈ ನಿಟ್ಟಿನಲ್ಲಿ ಗವಿಮಠ ಆವರಣದಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ವಿವಿಧ ಮಳಿಗೆಗಳನ್ನ ನಿರ್ಮಿಸಲಾಗುತ್ತಿದೆ. ಅದರಲ್ಲಿ ಸ್ವಾವಲಂಬಿ, ಸಮೃದ್ಧಿ, ಸಂತೋಷದ ಬದುಕು ಎಂಬ ಘೋಷವಾಕ್ಯದಡಿ ಸ್ವಯಂ ಉದ್ಯೋಗ ಮಾಡಿ ಯಶಸ್ಸು ಕಂಡವರ ಕುರಿತು ನೂರು ಮಳಿಗೆಗಳಿರಲಿವೆ. ಜಾತ್ರೆಗೆ ಬಂದವರಿಗೆ ಸ್ವಯಂ ಉದ್ಯೋಗದ ಕುರಿತು ಅರಿವು ಮೂಡಿಸಲಿವೆ. ಜೊತೆಗೆ ಕೃಷಿ ಮೇಳ, ಫಲಪುಷ್ಪ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ ಮಾರಾಟ ಮೇಳ ಜರುಗಲಿದೆ.
ಇದನ್ನೂ ಓದಿ: ಕೊಪ್ಪಳ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ... ಹರಿದು ಬಂದ ಭಕ್ತಸಾಗರ!