ಬೆಳಗಾವಿ: ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಛೆಯಲ್ಲಿ ನಡೆದಿದೆ. ಮಂಜುಳಾ ಬೋರೇಶ ಗದ್ದಿಹೊಳಿ (22) ಮೃತರು.
ಮೈಸೂರು ಮೂಲದ ಮಂಜುಳಾ ಹಾಗೂ ಬೆಳಗಾವಿಯ ಬೋರೇಶ ಗದ್ದಿಹೊಳಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಪರಸ್ಪರ ಪರಿಚಯವಾಗಿದ್ದರು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಆ ಬಳಿಕ ಮನೆಯವರ ವಿರೋಧದ ನಡುವೆಯೂ ಮನೆ ಬಿಟ್ಟು ಹೋಗಿ ಮದುವೆ ಆಗಿದ್ದರು. ನಂತರ ಮಚ್ಛೆಯಲ್ಲಿ ವಾಸವಾಗಿದ್ದರು. ಸದ್ಯ ಮಂಜುಳಾ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಆದರೆ, ನಿನ್ನೆ (ಶುಕ್ರವಾರ) ರಾತ್ರಿ ಮಂಜುಳಾ ಸಾವನ್ನಪ್ಪಿದ್ದಾರೆ.
ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ಬೋರೇಶ ಗದ್ದಿಹೊಳಿ ಹಾಗೂ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ. ಮಂಜುಳಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಡಿಸಿಪಿ ರೋಹನ್ ಜಗದೀಶ್ ಮಾತನಾಡಿ, "ಮಂಜುಳಾಗೆ ಆರಂಭದಿಂದಲೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು. ಅವಳ ಪತಿ ಹಾಗೂ ಮನೆಯವರು ಕೊಲೆ ಮಾಡಿ, ಇದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಹೀಗಾಗಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮದುವೆಯಾಗಿ ಏಳು ವರ್ಷದೊಳಗೆ ಗೃಹಿಣಿ ಮೃತಪಟ್ಟರೆ ಅದನ್ನು ವಿಶೇಷ ಪ್ರಕರಣ ಎಂದು ತನಿಖೆ ಮಾಡಬೇಕಾಗುತ್ತದೆ. ಕೌಟುಂಬಿಕ ಕಿರುಕುಳ, ಕೊಲೆಯ ಶಂಕೆ ಅಡಿ ಈ ಪ್ರಕರಣವನ್ನು ಪರಿಗಣಿಸುತ್ತೇವೆ. ಅಲ್ಲದೇ ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿದೆ" ಎಂದು ತಿಳಿಸಿದರು.